ರಾಧಿಕಾ ಪಂಡಿತ್ ಅದೃಷ್ಟವೋ, ಅಥವಾ ಶ್ರಮಕ್ಕೆ ಪ್ರತಿಭೆಗೆ ಸಂದ ಪ್ರತಿಫಲವೋ! ಸತತ ಎರಡನೇ ಬಾರಿಗೆ ಫಿಲಂಫೇರ್ ಪ್ರಶಸ್ತಿ ಸಂದಿದೆ. ಈ ಹಿಂದೆ ಕಳೆದ ವರ್ಷ ದಕ್ಷಿಣ ಭಾರತೀಯ ಫಿಲಂಫೇರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೊಗ್ಗಿನ ಮನಸು ಚಿತ್ರದ ಅಮೋಘ ಅಭಿನಯಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ರಾಧಿಕಾ ಪಂಡಿತ್ ಇದೀಗ ಈ ಬಾರಿಯ ದಕ್ಷಿಣ ಭಾರತೀಯ ಫಿಲಂಫೇರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿಯೂ ಲವ್ ಗುರು ಚಿತ್ರದ ಮನೋಜ್ಞ ನಟನೆಗಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಗಿಟ್ಟಿಸಿದ್ದಾರೆ. ಮುಂದಿನ ವರ್ಷವೂ ಇವರಿಗೆ ಕೃಷ್ಣನ್ ಲವ್ ಸ್ಟೋರಿಯ ನಟನೆಗೆ ಹ್ಯಾಟ್ರಿಕ್ ಪ್ರಶಸ್ತಿ ಸಿಕ್ಕರೂ ಆಶ್ಚರ್ಯವಿಲ್ಲ ಎನ್ನುತ್ತಿದ್ದಾರೆ ಗಾಂಧಿನಗರದ ಪಂಡಿತರು. ಈಗಷ್ಟೇ ಚಿತ್ರರಂಗಕ್ಕೆ ಕಾಲಿಟ್ಟ ಬೆಡಗಿಗೆ ಇಂಥ ಅನುಭವ ನಿಜಕ್ಕೂ ವಿಸ್ಮಯವೇ ಸರಿ.
ಅಂದಹಾಗೆ ರಾಧಿಕಾ ಪಂಡಿತ್ ಇದೀಗ ಭರ್ಜರಿ ಖುಷಿಯಾಗಿದ್ದಾರೆ ಎಂದು ಬಿಡಿಸಿ ಹೇಳಬೇಕಿಲ್ಲ. ಕಾರಣ ಒಂದೆರಡಲ್ಲ. ಎರಡು ಬಾರಿ ಸತತವಾಗಿ ಪ್ರಶಸ್ತಿ ಪಡೆದ ಖುಷಿ ಒಂದೆಡೆಯಾದರೆ, ಇನ್ನೊಂದೆಡೆ ಕೃಷ್ಣನ್ ಲವ್ ಸ್ಟೋರಿ ಭರ್ಜರಿಯಾಗಿ ಹಿಟ್ ಆಘಿದೆ. 50 ದಿನಗಳ ಯಶಸ್ಸನ್ನು ದಾಖಲಿಸಿ ಮುನ್ನುಗ್ಗುತ್ತಿದೆ. ಇದೇ ಖುಷಿಯಲ್ಲಿ ಇನ್ನೂ ಕೆಲವು ಚಿತ್ರಗಳಿಗೆ ರಾಧಿಕಾ ಸಹಿ ಹಾಕಿದ್ದಾರೆ. ಆದರೆ ಅಳೆದು ತೂಗಿ ಉತ್ತಮ ಪಾತ್ರಗಳಿಗೆ ಮಾತ್ರ ಒಕೆ ಅಂತಿದ್ದಾರೆ ಅನ್ನೋದು ಅಷ್ಟೇ ಸತ್ಯ.
ನಟಿಸಿದ್ದು ಕೆಲವೇ ಚಿತ್ರಗಳ್ಲಲಾದರೂ ರಾಧಿಕಾರ ಆಯ್ಕೆಗಳೆಲ್ಲವೂ ಬಹುತೇಕ ಯಶಸ್ಸು ಕಂಡಿವೆ. ಮೊಗ್ಗಿನ ಮನಸು, ಲವ್ ಗುರು, ಕೃಷ್ಣನ್ ಲವ್ ಸ್ಟೋರಿ ಯಶಸ್ಸಿನ ಪಟ್ಟಿಗೆ ಸೇರಿದರೆ, ಒಲವೇ ಜೀವನ ಲೆಕ್ಕಾಚಾರ ಫ್ಲಾಪ್ ಆದರೂ, ಅವರ ಪಾತ್ರಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಒಟ್ಟಾರೆ ರಾಧಿಕಾರ ಅಭಿನಯಕ್ಕೆ ಎಲ್ಲೂ ಅಪಸ್ವರ ಈವರೆಗೆ ಬಂದಿಲ್ಲ. ಅಂತಹ ಅತ್ಯುತ್ತಮ ಪಾತ್ರ ಪೋಷಣೆ ಅವರದ್ದು.
ಇದೀಗ ರಾಧಿಕಾ ಪಂಡಿತ್ ಅರ್ಜುನ್ ಸರ್ಜಾರ ಮತ್ತೊಬ್ಬ ಅಳಿಯ ಧೃವ್ ಸರ್ಜಾ ಜೊತೆಗೆ ಅದ್ದೂರಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ತರುಣ್ ಜೊತೆಗಿನ ಲವ್ ಗುರು ತಂಡದ ಮ್ತತೊಂದು ಕಾಣಿಕೆ ಗಾನಾ ಬಜಾನ ಬಹುತೇಕ ತೆರೆಗೆ ಬರಲು ಸಿದ್ಧವಾಗಿದೆ. ಜೊತೆಗೆ ಕಿರುತೆರೆಗೂ ಎಂಟ್ರಿ ಕೊಟ್ಟಿರುವ ರಾಧಿಕಾ ಸುವರ್ಣ ವಾಹಿನಿಯಲ್ಲಿ ಹಳ್ಳಿ ಹೈದ ಪ್ಯಾಟೆಗ್ ಬಂದ ರಿಯಾಲಿಟಿ ಶೋ ನಡೆಸಿ ಕೊಡಲಿದ್ದಾರೆ.ಒಟ್ಟಾರೆ ರಾಧಿಕಾಗೆ ದಕ್ಕಿದ ಈ ಅದೃಷ್ಟ, ಪ್ರಶಂಸೆಯ ಸುರಿಮಳೆ ಕನ್ನಡದ ಇತ್ತೀಚೆಗಿನ ಯಾವ ನಟಿಗೆ ಸಿಕ್ಕಿದೆ ಹೇಳಿ. ಈ ಅಪ್ಪಟ ಕನ್ನಡತಿಯ ಯಶೋಗಾಥೆ ಇನ್ನೂ ಮುಂದುವರಿಯಲಿ ಎಂದೇ ಹಾರೈಸೋಣ.