ಶ್ರೀನಾಗಶಕ್ತಿ ಚಿತ್ರ ಸಾಕಷ್ಟು ಭರವಸೆಯನ್ನು ಮೂಡಿಸಿದ್ದು, ರಾಮ್ ಕುಮಾರ್ ಹಾಗೂ ಶ್ರುತಿ ನಾಯಕ, ನಾಯಕಿಯಾಗಿ ಬಹುದಿನದ ನಂತರ ಚಿತ್ರವೊಂದರಲ್ಲಿ ಒಟ್ಟಾಗಿ ಅಭಿನಯಿಸುತ್ತಿದ್ದು, ಸಾಕಷ್ಟು ಕುತೂಹಲ ಕೆರಳಿಸಿದೆ.
ಚಿತ್ರದಲ್ಲಿ ನಟಿ ಚಂದ್ರಿಕಾ ಸಹ ಅಭಿನಯಿಸುತ್ತಿದ್ದು, ಸಾಕಷ್ಟು ಗ್ರಾಫಿಕ್ ಸೌಲಭ್ಯದ ಬಳಕೆಯ ಮೂಲಕ ಚಿತ್ರವನ್ನು ಶ್ರೀಮಂತಗೊಳಿಸಲಾಗುತ್ತಿದೆಯಂತೆ. ನಿಜಕ್ಕೂ ಚಿತ್ರವನ್ನು ವ್ಯವಸ್ಥಿತವಾಗಿ ಸಿದ್ಧಪಡಿಸಲಾಗುತ್ತಿದೆಯಂತೆ.
ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ರಾಜ್ಯದ ನಾನಾ ದೇವಾಲಯಗಳಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಸಂಪೂರ್ಣ ಧಾರ್ಮಿಕ ಪ್ರಧಾನ ಚಿತ್ರವಾಗಿ ಇದು ಮೂಡಿಬರಲಿದೆ. ಸದ್ಯ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯವನ್ನು ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ಶ್ರೀ ನಾಗಶಕ್ತಿ ಚಿತ್ರದ ಕಥೆ ಕೇಳಿದ ತಕ್ಷಣ ನಿಜಕ್ಕೂ ಇಂಥದ್ದೊಂದು ಪಾತ್ರದಲ್ಲಿ ನಟಿಸಬೇಕು ಅನ್ನಿಸಿದು. ಇಂಥದ್ದೊಂದು ಪಾತ್ರದಲ್ಲಿ ನಟಿಸುವ ಹಂಬಲ ನನಗೆ ಬಹು ಸಮಯದಿಂದ ಇತ್ತು. ಇದೀಗ ಈಡೇರುತ್ತಿದೆ. ಅನುಭವಿಸಿ ನಟಿಸಿದ್ದೇನೆ. ಪಾತ್ರದಲ್ಲಿ ಪಾತ್ರವಾಗಿ ಅಭಿನಯಿಸಿದ್ದೇನೆ. ನಾಗದೇವತೆಯಾಗಿ ನಾನು ಕಾಣಿಸಿಕೊಳ್ಳುತ್ತಿರುವುದು ಅದೃಷ್ಟ ಅನ್ನುತ್ತಾರೆ ನಟಿ ಚಂದ್ರಿಕಾ.
ಸಾಯಿ ಪ್ರಕಾಶ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ನಾಯಕಿಯಾಗಿ ಶ್ರುತಿ ಕಾಣಿಸಿಕೊಂಡಿದ್ದಾರೆ. ಇವರು ಹಾಗೂ ರಾಮ್ ಕುಮಾರ್ ಕೆಲ ವರ್ಷದ ಹಿಂದೆ ಕನ್ನಡದ ಹಿಟ್ ಜೋಡಿ ಅಂತಲೇ ಜನಜನಿತವಾಗಿದ್ದರು. ಇದೀಗ ಅವರ ಮರು ಸಮಾಗಮ, ಚಿತ್ರಕ್ಕೆ ಬಲ ತರಲಿದೆ ಎನ್ನುವ ಮಾತು ಕೇಳಿ ಬರುತ್ತಿದೆ.