ರವಿಚಂದ್ರನ್ ಅಭಿನಯದ 'ನಾರಿಯ ಸೀರೇ ಕದ್ದ' ಚಿತ್ರದ ಚಿತ್ರೀಕರಣ ನಗರದಲ್ಲಿ ಅದ್ದೂರಿಯಾಗಿ ಸಾಗಿದೆ. ಅಬ್ಬಾಯಿ ನಾಯ್ಡು ಸ್ಟುಡಿಯೊದಲ್ಲಿ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು, ಹಾಡಿನ ಚಿತ್ರೀಕರಣ ಇಲ್ಲಿಯೇ ನಡೆಯಿತು. ರವಿಚಂದ್ರನ್ ಖ್ಯಾತಿಗೆ ತಕ್ಕಂತೆ ಚಿತ್ರದ ಭಾರೀ ಸೆಟ್ ಅಲ್ಲಿ ತಲೆ ಎತ್ತಿ ನಿಂತಿದ್ದು, ನಟ ನವೀನ್ ಕೃಷ್ಣ ಹಾಗೂ ನಾಯಕಿ ನಿಖಿತಾ ಈ ಹಾಡಲ್ಲಿ ಭಾಗವಹಿಸಿದ್ದರು.
ಸುಂದರವಾದ ಜುಳು ಜುಳು ಹರಿಯುವ ನದಿಯಲ್ಲಿ, ಪುಟ್ಟದೊಂದು ಜಲಪಾತದ ನಡುವೆ ನೀರಲ್ಲಿ ಆಟವಾಡುತ್ತಿದ್ದ ನಾಯಕ- ನಾಯಕಿ ಸಾಕಷ್ಟು ಹಸಿರಿನ ನಡುವೆ ಕ್ಯಾಮರಾಗೆ ಫೋಸ್ ನೀಡಿದರು. ಫೈವ್ ಸ್ಟಾರ್ ಗಣೇಶ್ ಕೋರಿಯೊಗ್ರಫಿಯಲ್ಲಿ ಮೂಡಿಬಂದ ಈ ಹಾಡಿನಲ್ಲಿ, ಸೀರೆ ಉಟ್ಟ ನಾರಿ ಎಷ್ಟು ಸುಂದರಿ ಎನ್ನುವುದನ್ನು ವರ್ಣನೆ ಮಾಡುತ್ತಿತ್ತು. ಹಾಡಿಗೆ ತಕ್ಕಂತೆ ನಾಯಕ ನಾಯಕಿ ಹೆಜ್ಜೆ ಹಾಕಿದರು.
ಹಾಡಿನ ಸಾಹಿತ್ಯ ಹಾಗೂ ಸಂಗೀತ ವಿ. ರವಿಚಂದ್ರನ್ ಅವರದ್ದು ಅನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ನೃತ್ಯಗಾತಿಯರ ನಡುವೆ ನಾಯಕ ನಾಯಕಿ ನೀರಲ್ಲಿ ಬಿದ್ದು ಹೊರಳಾಡುತ್ತಿದ್ದರೆ, ಸೆಟ್ನಲ್ಲಿ ರವಿಚಂದ್ರನ್ ಅಭಿನಯದ ಹಳೆ ಚಿತ್ರಗಳು ನೆನಪಾಗುತ್ತಿದ್ದವು. ಈ ಚಿತ್ರದಲ್ಲಿ ಹರ್ಷಿಕಾ ಪೂಣಚ್ಚ ಸಹ ಅಭಿನಯಿಸುತ್ತಿದ್ದಾರೆ. ಇವರಿಗೂ ಚಿತ್ರದಲ್ಲಿ ಪ್ರಮುಖ ಪಾತ್ರ ನೀಡಲಾಗಿದೆ. 15 ಲಕ್ಷ ರೂ.ವೆಚ್ಚದಲ್ಲಿ ಸಿದ್ಧವಾದ ಅದ್ದೂರಿ ಸೆಟ್ ಚಿತ್ರದ ಹಾಡಿನ ಪ್ರಮುಖ ಆಕರ್ಷಣೆಯಾಗಿರುವುದು ಸುಳ್ಳಲ್ಲ. ಚಿತ್ರದ ತೆರೆಗೆ ಬಂದ ಮೇಲೆ ಅದರ ಅಂದ ಯಾವ ರೀತಿ ಕಾಣುವುದೋ ಪ್ರೇಕ್ಷಕರೇ ಸವಿದು ಹೇಳಬೇಕು.