ನಟ ರಮೇಶ್ ಶಾಕ್ ಬಗ್ಗೆ ವಿಪರೀತ ತಲೆಕೆಡಿಸಿಕೊಂಡಿದ್ದಾರೆ. ಇವರಿಗೆ ದಿನವಿಡೀ ಈಗ ಶಾಕ್‌ನದ್ದೇ ಚಿಂತೆ. ನಿಂತಲ್ಲಿ ಕೂತಲ್ಲಿ, ಎದ್ದಲ್ಲಿ ಎಲ್ಲೆಲ್ಲೂ ಶಾಕ್!
ಈ ಶಾಕ್ ಸುದ್ದಿ ಕೇಳಿ ನೀವು ಖಂಡಿತಾ ಶಾಕ್ ಆಗಬೇಡಿ. ವಿಷಯ ತುಂಬಾ ಸಿಂಪಲ್. ರಮೇಶ್‌ಗೆ ಖಂಡಿತಾ ಶಾಕ್ ತಗುಲಿಲ್ಲ. ಸದ್ಯ ಅವರು ಶಾಕ್ ಎಂಬ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ ಅಷ್ಟೇ. ಶ್ರೀ ಸಂಕೇಶ್ವರ ಫಿಲಂಸ್ ಲಾಂಛನದಲ್ಲಿ ಅಮರ್ ಚಂದ್ ಜೈನ್, ವಿಜಯ್ ಸುರಾನಾ, ಮಂಗೀಲಾಲ್ ಜೈನ್ ಮತ್ತು ರಮೇಶ್ ಸೇರಿ ನಿರ್ಮಿಸುತ್ತಿರುವ ಚಿತ್ರ ಇದಾಗಿದೆ.
ಚಿತ್ರದ ಚಿತ್ರೀಕರಣ ಅರಸೀಕೆರೆಯಲ್ಲಿ ಆರಂಭವಾಗಿದೆ. ರಮೇಶ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರವನ್ನು ಹ.ಸೂ. ರಾಜಶೇಖರ್ ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ಚಿತ್ರ ನಿರ್ದೇಶನದಲ್ಲಿ ಸಾಕಷ್ಟು ಪಳಗಿರುವ ಇವರು ಶಾಕ್ ಒಂದು ವಿಭಿನ್ನ ಕಥೆ ಎನ್ನುತ್ತಾರೆ. ಸುಮಾ ಗುಹಾ ನಾಯಕಿಯಾಗಿರುವ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನೀನಾಸಂ ಅಶ್ವತ್ ಕಾಣಿಸಿಕೊಳ್ಳಲಿದ್ದಾರೆ. ವಿಭಿನ್ನ ಕಥೆಯನ್ನೊಳಗೊಂಡ ಇದರ ಚಿತ್ರೀಕರಣ ಒಂದೇ ಮನೆಯಲ್ಲಿ ನಡೆಯಲಿದೆ. ಚಿತ್ರಕಥೆ ಹಾಗೂ ಸಂಭಾಷಣೆಯನ್ನು ನಿರ್ದೇಶಕರೇ ಬರೆದಿದ್ದಾರೆ. ನಿರಂಜನ ಬಾಬು ಛಾಯಾಗ್ರಹಣ, ಶ್ರೀನಿವಾಸ್ ರೆಡ್ಡಿ ಸಂಕಲನ, ಬಾಬುಖಾನ್ ಕಲಾ ನಿರ್ದೇಶನ ಹಾಗೂ ಜಾನಿ ಸಾಹಸ ನಿರ್ದೇಶನವಿರುವ ಈ ಚಿತ್ರದಲ್ಲಿ ನಾಯಕ ರಮೇಶ್ ಸೈಕೊ ಪಾತ್ರ ನಿರ್ವಹಿಸುತ್ತಿದ್ದಾರೆ.