ಒಂದೆಡೆ ಚಿತ್ರ ಗೆಲ್ಲುತ್ತದೆ ಎಂದು ನಿರೀಕ್ಷಿಸಿದ್ದ 'ಮತ್ತೆ ಮುಂಗಾರು' ಹೇಳಿಕೊಳ್ಳುವ ಯಶಸ್ಸು ಕಾಣುವ ಹಾದಿಯಲ್ಲಿಲ್ಲ. ಇನ್ನೊಂದೆಡೆ ತೆರೆ ಕಾಣುವುದೇ ಕಷ್ಟ, ಹಾಗೂ ಈ ಅದ್ದೂರಿ ಚಿತ್ರಕ್ಕೆ ದುಡ್ಡು ಸುರಿದ ನಿರ್ಮಾಪಕ ಬೀದಿ ಪಾಲಾಗುತ್ತಾನೆ ಅಂತ ಹೇಳಿಸಿಕೊಂಡಿದ್ದ 'ಚೆಲುವೆಯೇ ನಿನ್ನ ನೋಡಲು' ಚಿತ್ರ ಭರ್ಜರಿ ಹಿಟ್ ಆಗಿದೆ. ಶಿವಣ್ಣನ ಇತ್ತೀಚಿನ ಯಾವ ಚಿತ್ರವೂ ಇಷ್ಟೊಂದು ಓಪನಿಂಗ್ ಕಂಡಿರಲಿಲ್ಲ. ಅಂತಹ ಭರ್ಜರಿ ಓಪನಿಂಗ್ ಈ ಚಿತ್ರಕ್ಕೆ ಸಿಕ್ಕಿದೆ.
ನಾಲ್ಕು ದಿನಗಳಲ್ಲಿ ಚಿತ್ರಕ್ಕೆ ಸಿಕ್ಕ ಯಶಸ್ಸಿಗೆ ನಿರ್ಮಾಪಕ ಸುರೇಶ್ ಸಾಕಷ್ಟು ಸಮಾಧಾನ ಪಟ್ಟುಕೊಂಡಿದ್ದಾರೆ. ಒಂದಿಷ್ಟು ನಿರಾಳವಾಗಿದ್ದಾರೆ. ಚಿತ್ರಕ್ಕೆ ದಕ್ಕಿದ ಉತ್ತಮ ಪ್ರತಿಕ್ರಿಯೆ ಕಂಡು ಮಾತನಾಡಿದ ಅವರು ಮೊದಲು ನೆನೆಯುವುದು ತಮ್ಮ ಹೆಂಡತಿ ಮಕ್ಕಳನ್ನು. 'ನಮ್ಮ ಮನೆಯಲ್ಲಿ ನನ್ನ ಪತ್ನಿ ಮತ್ತು ಮಕ್ಕಳು ನೀಡಿದ ನೈತಿಕ ಬೆಂಬಲವನ್ನು ಯಾವತ್ತೂ ಮರೆಯುವುದಿಲ್ಲ. ನನ್ನ ಪತ್ನಿ ಸದಾ ನಂಗೆ ಧೈರ್ಯ ನೀಡುತ್ತಿದ್ದಳು. ಅವಳು ದೇವತೆಯಂಥ ಹೆಣ್ಣು ಮಗಳು. ಅವರಿದ್ದಾಗ ನಂಗೆ ಸೋಲೆಲ್ಲಿಯದು ನೀವೇ ಹೇಳಿ?' ಎನ್ನುತ್ತಾರೆ.
ಇಷ್ಟಕ್ಕೇ ನಿರ್ಮಾಪಕ ಬಿಟ್ಟಿಲ್ಲ. ಚಿತ್ರಕ್ಕೆ ಇನ್ನೂ ಹೆಚ್ಚಿನ ಪ್ರಚಾರ ನೀಡಿ ರಾಜ್ಯದೆಲ್ಲೆಡೆಯ ಜನರನ್ನು ಚಿತ್ರಮಂದಿರದೆಡೆಗೆ ಎಳೆದು ತರುವ ಪ್ರಯತ್ನ ಕೈಗೊಳ್ಳಲಿದ್ದಾರೆ. ಇನ್ನು ಎರಡು ವಾರ ಪ್ರಚಾರ ಕಾರ್ಯವನ್ನು ಮುಂದುವರಿಸುವುದಾಗಿ ಅವರು ಹೇಳಿದ್ದಾರೆ. ರಾಜ್ಯಾದ್ಯಂತ ಇಡೀ ತಂಡವನ್ನು ಜೊತೆಗೆ ಕರೆದುಕೊಂಡು ಸುತ್ತಲಿದ್ದಾರೆ. ಅಲ್ಲಲ್ಲಿ ಸಮಾರಂಭ ಹಮ್ಮಿಕೊಂಡು ಚಿತ್ರದ ಜನಪ್ರಿಯತೆಗೆ ಶ್ರಮಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.