ಪುನೀತ್ ರಾಜ್ ಕುಮಾರ್ ಅವರ ಜನಪ್ರಿಯ ಚಿತ್ರ ರಾಮ್ನ 'ಹೊಸಾ ಗಾನಾ ಬಜಾನಾ, ಹಳೆ ಪ್ರೇಮ ಪುರಾಣಾ' ಗೀತೆ ಯಾರಿಗೆ ಗೊತ್ತಿಲ್ಲ ಹೇಳಿ. ಇತ್ತೀಚೆಗೆ ಎಲ್ಲರ ಬಾಯಲ್ಲೂ ಅದೇ ಮಂತ್ರ. ಇದೀಗ ಅದೇ ಗಾನ ಬಜಾನಾ ಮತ್ತೊಂದು ಚಿತ್ರಕ್ಕೆ ಟೈಟಲ್ಲೇ ಆಗಿದೆ. ಶೀಘ್ರದಲ್ಲೇ ಮುಂದಿನ ತಿಂಗಳು ಅದು ತೆರೆಗೆ ಬರಲೂ ಇದೆ.
ರಾಧಿಕಾ ಪಂಡಿತ್ರ ಅದ್ಭುತ ನಟನೆಗೆ ಫಿಲಂಫೇರ್ ಪ್ರಶಸ್ತಿಯ ಗರಿಯನ್ನೇ ತಂದುಕೊಟ್ಟ ಲವ್ ಗುರು ಚಿತ್ರ ತಂಡವೇ ಈ ಚಿತ್ರದ ಮೂಲಕ ಮತ್ತೆ ಒಂದಾಗಿ ಕೆಲಸ ಮಾಡಿದ್ದಾರೆ. ಹಾಗಾಗಿ ಈ ಚಿತ್ರದ ಮೂಲಕ ಮತ್ತೊಂದು ಉತ್ತಮ ಚಿತ್ರ ನಿರೀಕ್ಷಿಸಿದರೆ ತಪ್ಪೂ ಅಲ್ಲ.
ಅಂದಹಾಗೆ, ಹೊಸಾ ಗಾನ ಬಜಾನಾ ಚಿತ್ರ ಪ್ರೇಮಕಥೆ ಎಂದು ಪ್ರತ್ಯೇಕವಾಗಿ ಹೇಳಿಕೊಳ್ಳುವ ಅಗತ್ಯವಿಲ್ಲ. ಪ್ರಶಾಂತ್ ರಾಜ್ ನಿರ್ದೇಶನದ ಮಹತ್ವಾಕಾಂಕ್ಷೆಯ ಚಿತ್ರ ಇದಾಗಿದ್ದು, ಮಾಡರ್ನ್ ಯುವಕ ಯುವತಿಯರ ಮಾಡರ್ನ್ ಕಥಾನಕ ಇದಾಗಿದೆ.
ಈಗಾಗಲೇ ಜನತೆಗೆ ಲವ್ ಗುರು ಎಂಬ ಚಿತ್ರವನ್ನು ನೀಡಿ ಸೈ ಎನಿಸಿಕೊಂಡಿರುವ ಪ್ರಶಾಂತ್ ರಾಜ್ ಈ ಒಂದು ಚಿತ್ರವನ್ನೂ ಅಷ್ಟೇ ಆಸಕ್ತಿಯಿಂದ ಸಿದ್ಧಪಡಿಸಿದ್ದಾರೆ. ಚಿತ್ರದ ಬಗ್ಗೆ ಅತಿಯಾದ ನಿರೀಕ್ಷೆ ಇರಿಸಿಕೊಂಡಿರುವ ಇವರು, ಚಿತ್ರಕ್ಕೆ ಅತ್ಯುತ್ತಮ ಹಾಡನ್ನು ನೀಡಿದ್ದೇವೆ. ಅದರ ಫಲ ಈಗಾಗಲೇ ಮಾರುಕಟ್ಟೆಯಲ್ಲಿ ಸಿಕ್ಕಿದೆ ಎನ್ನುತ್ತಾರೆ.
ಚಿತ್ರದಲ್ಲಿ ಬಹುತೇಕ ಲವ್ ಗುರು ಚಿತ್ರತಂಡವೇ ಇದೆ. ತರುಣ್, ದಿಲೀಪ್ ರಾಜ್, ರಾಧಿಕಾ ಪಂಡಿತ್ ಮುಖ್ಯಪಾತ್ರದಲ್ಲಿದ್ದಾರೆ. ಚಿತ್ರಕ್ಕೆ ಜೋಶ್ವಾ ಶ್ರೀಧರ್ ಸಂಗೀತ ನೀಡಿದ್ದು, ಎಲ್ಲೆಡೆ ಅಪಾರ ಮನ್ನಣೆ ಹಾಗೂ ಜನ ಬೆಂಬಲವನ್ನು ಪಡೆದಿದೆ. ಗೀತೆಗೆ ಉತ್ತಮ ಸಂಗೀತ ನೀಡಿರುವ ಇವರಿಂದ ಚಿತ್ರದ ಬಗ್ಗೂ ಅದೇ ನಿರೀಕ್ಷೆ ಇರಿಸಿಕೊಳ್ಳಲಾಗಿದೆ. ಈಗಾಗಲೇ ಚಿತ್ರದ ಪ್ರೋಮೊ ನೋಡಿ ಜನ ಸಾಕಷ್ಟು ಆಕರ್ಷಿತರಾಗಿದ್ದು, ಚಿತ್ರದ ಬಗ್ಗೆಯೂ ಸಾಕಷ್ಟು ನಿರೀಕ್ಷೆ ಹೊಂದಿದ್ದಾರೆ.