ಯಾವುದೇ ಸಿನಿಮಾ ತೆಗೆದುಕೊಳ್ಳಿ ಅದರಲ್ಲಿ ಪ್ರೀತಿ ಇಲ್ಲ ಅಂದರೆ ಅದಕ್ಕೆ ಅರ್ಥವೇ ಇಲ್ಲ ಅನ್ನಿಸುವ ಮಟ್ಟಕ್ಕೆ ಚಿತ್ರರಂಗ ಪ್ರೀತಿಯನ್ನು ಅವಲಂಬಿಸಿದೆ. ಇದೀಗ ಇಂಥದ್ದೇ ಒಂದು ಲವ್ ಸಿನೆಮಾ ತೆರೆಗೆ ಬರಲಿದೆ. ಹೆಸರು ಕಾವೇರಿ ಲವ್ಸ್ ಕರಿಯ.
ಕನ್ನಡದಲ್ಲಿ ಕರಿಯ ಎಂದ ಮೇಲೆ ಇನ್ಯಾರು ಇರಲಿಕ್ಕೆ ಸಾಧ್ಯ ಹೇಳಿ. ಹೌದು, ನಿಮ್ಮ ಊಹೆ ಸರಿಯಾಗಿಯೇ ಇದೆ. ಕರಿಯಾ ಐ ಲವ್ ಯೂ ಎಂಬ ಹಾಡಿನಿಂದ ಜನಪ್ರಿಯತೆಯ ಅಲೆಯಲ್ಲಿ ತೇಲಿದ, ತನ್ನನ್ನು ತಾನು ಕರಿಯ ಎಂದು ಕರೆದುಕೊಳ್ಳುವಲ್ಲೇ ಹಿತ ಕಂಡ ವಿಜಯ್ ಮತ್ತೆ ಕರಿಯನಾಗಿ ಲವ್ ಮಾಡಲಿದ್ದಾರೆ. ಆದರೆ, ಈ ಕಾವೇರಿ ಯಾರು ಎಂಬ ಕುತೂಹಲಕ್ಕೆ ಉತ್ತರ ಸಿಗಲು ಕೊಂಚ ಕಾಲ ಬೇಕು. ಚಿತ್ರದ ನಾಯಕಿಗಾಗಿ ತಂಡ ಹುಡುಕಾಟ ನಡೆಸಿದ್ದು, ಕನ್ನಡದವರಿಗೇ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.
ಚಿತ್ರವನ್ನು ಎಂ. ಭದ್ರಿ ನಿರ್ಮಿಸುತ್ತಿದ್ದಾರೆ. ವಿ. ಹರಿಕೃಷ್ಣ ಸಂಗೀತ ನೀಡಿದರೆ, ಜಗದೀಶ್ವಾಲಿ ಕ್ಯಾಮರಾ ಕೈಚಳಕ ತೋರಲಿದ್ದಾರೆ. ತನ್ನನ್ನು ಅಪಾರವಾಗಿ ಪ್ರೀತಿಸುವ ಕಾವೇರಿ ಎಲ್ಲೋ ಕಳೆದು ಹೋಗುತ್ತಾಳೆ. ಅವಳನ್ನು ನಾಯಕ ಅರ್ಥಾತ್ ಕರಿಯ ಹುಡುಕುವುದೇ ಚಿತ್ರದ ಒಂದೆಳೆ ಕಥೆ. ಸಾಯಿ ರಮೇಶ್ ನಿರ್ದೇಶನದಲ್ಲಿ ಚಿತ್ರ ಮೂಡಿಬಂದಿದ್ದು, ಸೆಪ್ಟೆಂಬರ್‌ನಲ್ಲೇ ಚಿತ್ರೀಕರಣ ಆರಂಭವಾಗುವ ಲಕ್ಷಣ ಕಾಣುತ್ತಿದೆ.