ಅಂತೂ ಇಂತೂ ಜೊತೆಗಾರ ಜನರ ಮುಂದೆ ಬರಲು ಕ್ಷಣಗಣನೆ ಆರಂಭಿಸಿದ್ದಾನೆ. ಬಹು ಸಮಯದ ನಂತರ ಕೊನೆಗೂ ಚಿತ್ರಕ್ಕೆ ಬಿಡುಗಡೆ ಭಾಗ್ಯ ಲಭಿಸಿದ್ದು ಚಿತ್ರ ತಂಡದಲ್ಲಿ ನೆಮ್ಮದಿಯ ಉಸಿರು ಬಿಡುವಂತೆ ಮಾಡಿದೆ.
ಚಿತ್ರ ಬಿಡುಗಡೆ ಆಗುವ ಸಿಹಿ ಸುದ್ದಿಯನ್ನು ನಾಯಕಿ ರಮ್ಯಾ ಬಹಿರಂಗ ಪಡಿಸಿದ್ದಾರೆ. ಚಿತ್ರಕ್ಕೆ ಇನ್ನೊಂದು ಓಪನಿಂಗ್ ಹಾಡನ್ನು ಸೇರಿಸಿ, ಕೊಂಚ ಸನ್ನಿವೇಶ ಬದಲಿಸಿ ಚಿತ್ರ ಬಿಡುಗಡೆ ಮಾಡುವ ಇಂಗಿತವನ್ನು ನಿರ್ದೇಶಕರು ವ್ಯಕ್ತಪಡಿಸಿದ್ದು, ಅದಕ್ಕೆ ನಿರ್ಮಾಪಕರಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿದೆಯಂತೆ. ಶೀಘ್ರವೇ ಈ ಕಾರ್ಯವೂ ಆಗಲಿದೆ ಎನ್ನುವ ಮಾತು ಕೇಳಿ ಬರುತ್ತಿದೆ.
ಹಾಡಿನ ಚಿತ್ರೀಕರಣ ಸದ್ಯ ರಾಕ್ಲೈನ್ ಸ್ಟುಡಿಯೋದಲ್ಲಿ ನಡೆಯುತ್ತಿದ್ದು ನಟ ಪ್ರೇಮ್ ಹಾಗೂ ನಟಿ ಜೆನ್ನಿಫರ್ ಕೊತ್ವಾಲ್ ಶೂಟಿಂಗ್ನಲ್ಲಿ ಪಾಲ್ಗೊಂಡಿದ್ದಾರೆ. ಚಿತ್ರದ ಓಪನಿಂಗ್ ಹಾಡೊಂದರಲ್ಲಿ ಜೆನ್ನಿ ಪ್ರೇಮ್ ಜೊತೆ ಹೆಜ್ಜೆ ಹಾಕಲಿದ್ದಾರೆ. ಈ ಹಿಂದೆ ಈ ಹಾಡಿಗೆ ಯಾನಾ ಗುಪ್ತಾರನ್ನು ಕರೆಸುವುದಾಗಿ ತೀರ್ಮಾನ ಮಾಡಿದ್ದರೂ, ಅಂತಿಮವಾಗಿ ಜೆನ್ನಿಗೆ ಅವಕಾಶ ಸಿಕ್ಕಿದೆ. ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ಹಾಡಿನ ಚಿತ್ರೀಕರಣ ನಡೆಯಲಿದೆ.
ಅಂದ ಹಾಗೆ, ರಮ್ಯಾ ಅಭಿನಯದ ಕೆಲ ದೃಶ್ಯವನ್ನು ಸಹ ಚಿತ್ರಕ್ಕೆ ಸೇರಿಸುವ ಕಾರ್ಯ ಆಗಬೇಕಿದೆಯಂತೆ. ಸದ್ಯ ರಮ್ಯಾ ಹೊಸ ಮನೆ ಪ್ರವೇಶ ಮಾಡಿ, ಅಲ್ಲಿಂದ ನೇರವಾಗಿ ದಂಡಂ ದಶಗುಣಂ ಚಿತ್ರದ ಶೂಟಿಂಗ್ಗಾಗಿ ತೆರಳಿದ್ದಾರೆ. ಚಕ್ಲಿಹೊಳೆ ಸಮೀಪ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಅದರ ಚಿತ್ರೀಕರಣ ಮುಗಿಯುತ್ತಿದ್ದಂತೆ ರಮ್ಯಾ ಜೊತೆಗಾರನಿಗಾಗಿ ಈ ಹಾಡಿನ ಚಿತ್ರೀಕರಣ ಪೂರೈಸಿಕೊಡಲಿದ್ದಾರಂತೆ. ಅನಂತರವೇ ಜೊತೆಗಾರನಿಗೆ ಬಿಡುಗಡೆ ಭಾಗ್ಯ. ಸದ್ಯ ಬ್ಯಾಂಕ್ ಸಾಲದ ಸಮಸ್ಯೆಯೆಲ್ಲಾ ಜೊತೆಗಾರನಿಂದ ದೂರಾಗಿದ್ದು, ಬಿಡುಗಡೆಗೆ ಸಜ್ಜಾಗಲಿದೆ ಎನ್ನಲಾಗುತ್ತಿದೆ.