ಉಪೇಂದ್ರ ನಟನೆ, ನಿರ್ದೇಶನದ ಸೂಪರ್ ಚಿತ್ರದ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ನಟಿ ನಯನತಾರಾ ಬಗ್ಗೆ ಸಿಕ್ಕಾಪಟ್ಟೆ ಹೊಗಳಿದ್ದಾರೆ. ನಯನತಾರಾ ಒಬ್ಬ ಅದ್ಭುತ ನಟಿ ಮಾತ್ರವಲ್ಲದೆ ಸಹೃದಯಿ ಎಂದು ರಾಕ್ಲೈನ್ ವೆಂಕಟೇಶ್ ಪ್ರಶಂಸೆಯ ಸುರಿಮಳೆಯನ್ನೇ ಸುರಿಸಿದ್ದಾರೆ. ನನ್ನ ಎಷ್ಟೋ ಚಿತ್ರಗಳಲ್ಲಿ ಪರಭಾಷಾ ನಟಿಯರು ನಟಿಸಿದ್ದಾರೆ. ಪರಭಾಷಾ ನಟಿಯರು ನನ್ನ ಸಿನಿಮಾಗಳಿಗೇನೂ ಹೊಸತೇನಲ್ಲ. ಆಧರೆ ನಯನತಾರಾ ಮಾತ್ರ ಈವರೆಗೆ ನಟಿಸಿದ ಎಲ್ಲ ಪರಭಾಷಾ ನಟಿಯರಿಗಿಂತಲೂ ಅತ್ಯದ್ಭುತ ಎಂದು ರಾಕ್ ಹೊಗಳಿದ್ದಾರೆ. ಕೇವಲ ರಾಕ್ ಅಷ್ಟೇ ಅಲ್ಲ. ಉಪೇಂದ್ರ ಕೂಡಾ ಮನಸಾರೆ ನಯನತಾರಾರ ಬಗ್ಗೆ ಸಂತೃಪ್ತರಾಗಿದ್ದಾರೆ.
ರಾಕ್ ಹೀಗೆ ಹೇಳೋದಕ್ಕೂ ಕಾರಣ ಇದೆ. ಲಂಡನ್ನಲ್ಲಿ ಸೂಪರ್ ತಂಡ ಶೂಟಿಂಗ್ನಲ್ಲಿದ್ದಾಗ ಸಿಕ್ಕಾಪಟ್ಟೆ ಡಿಸ್ಟರ್ಬೆನ್ಸ್ ಆಗುವಂಥ ಸನ್ನಿವೇಶ ಸೃಷ್ಟಿಯಾಗಿತ್ತು. ಆದರೂ, ನಯನತಾರಾ ಅದೆಲ್ಲವನ್ನೂ ಸಹಿಸಿಕೊಂಡೇ ತನ್ನ ಪಾತ್ರವನ್ನು ನಿರ್ವಹಿಸಿದರಂತೆ. ಯಾವ ತೊಂದರೆಯನ್ನೂ ಬಾಯ್ಬಿಟ್ಟು ಹೇಳದೆ, ತಾನೇ ಎಲ್ಲದಕ್ಕೂ ಅಡ್ಜೆಸ್ಟ್ ಆಗಿದ್ದರಂತೆ ನಯನ್. ಇದು ನಿಜಕ್ಕೂ ಪ್ರತಿಯೊಬ್ಬ ಕಲಾವಿದನನ್ನೂ ಕಣ್ತೆರೆಸುವಂಥದ್ದು ಎನ್ನುತ್ತಾರೆ ರಾಕ್.
ಅಷ್ಟೇ ಅಲ್ಲ. ಲಡನ್ನಲ್ಲಿ ಐಷಾರಾಮಿ ಸ್ಟಾರ್ ಹೊಟೇಲುಗಳಲ್ಲಿ ಉಳಿದುಕೊಳ್ಳುವುದನ್ನು ರಿಜೆಕ್ಟ್ ಮಾಡಿ ಸಾಮಾನ್ಯ ಹೊಟೇಲಿನಲ್ಲಿ ಉಳಿದುಕೊಳ್ಳಲು ನಿರ್ಧರಿಸಿದ್ದೂ ಕೂಡಾ ರಾಕ್ರನ್ನು ಇಂಪ್ರೆಸ್ ಮಾಡಿದೆ. ಜೊತೆಗೆ ನಯನತಾರಾ ಉಳಿದೆಲ್ಲ ನಟಿಗಳಂತೆ ತನ್ನ ನಟನೆಯ ಅಧ್ಯಾಯ ಮುಗಿಸಿಕೊಂಡು ನೇರ ಹೋಟೆಲ್ಲಿಗೆ ಹೋಗದೆ, ಚಿತ್ರದ ಇತರ ಭಾಗದ ಶೂಟಿಂಗನ್ನೂ ಕುಳಿತು ನೋಡುತ್ತಿದ್ದಂತೆ. ಉಪೇಂದ್ರ ಅವರೂ ಕೂಡಾ, ನಿಮ್ಮ ಭಾಗದ ಶೂಟಿಂಗ್ ಮುಗಿದಿದೆ, ನೀವು ಬೇಕಾದರೆ ರೆಸ್ಟ್ ತೆಗೆದುಕೊಳ್ಳಿ ಅಂದರೂ, ಆಕೆ ರೆಸ್ಟ್ ತೆಗೆದುಕೊಳ್ಳುವ ಬಗ್ಗೆ ಯೋಚಿಸದೆ, ಶೂಟಿಂಗನ್ನು ನೋಡುತ್ತಾ ಕೂತಿದ್ದರಂತೆ.
ಇವೆಲ್ಲವುಗಳ ಜೊತೆಗೇ, ನಯನತಾರಾ 80 ದಿನಗಳ ಶೂಟಿಂಗ್ ಮುಗಿದ ಮೇಲಷ್ಟೇ ತನ್ನ ಪಾಲಿನ ಸಂಭಾವನೆ ಹಣವನ್ನು ತೆಗೆದುಕೊಂಡರಂತೆ. ಸೂಪರ್ ಚಿತ್ರ ಸೂಪರ್ ಆಗಿ ಹೊರಬರಬೇಕೆಂದು ನಿರ್ದೇಶಕ, ನಟ ಉಪೇಂದ್ರ ಹಗಲು ರಾತ್ರಿ ಕಷ್ಟಪಡುತ್ತಿರುವಾಗ, ನಟಿ ನಯನತಾರಾ ಕೂಡಾ ನಮ್ಮೆಲ್ಲರ ಪರಿಶ್ರಮಕ್ಕೆ ಪ್ರೋತ್ಸಾಹ ನೀಡುತ್ತಿರುವುದು ನಮಗೆ ನಿಜಕ್ಕೂ ಹರ್ಷ ತಂದಿದೆ. ಆಕೆಯನ್ನು ನೋಡಿ ನಟಿಯರು ಕಲಿಯೋದು ಬಹಳಷ್ಟಿದೆ ಎಂದು ರಾಕ್ಲೈನ್ ಸಿಕ್ಕಾಪಟ್ಟೆ ಹೊಗಳಿದ್ದಾರೆ.