ಸದ್ದಿಲ್ಲದೆ ಶುರುವಾಗಿದೆ ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ
ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ ಎಂಬ ಹೆಸರನ್ನು ಹೊಂದಿರುವ ಚಿತ್ರವೊಂದು ಸ್ಯಾಂಡಲ್‌ವುಡ್‌ನಲ್ಲಿ ಸದ್ದಿಲ್ಲದೇ ಸಿದ್ಧವಾಗಿದೆ. ಚಿತ್ರೀಕರಣ ಹಂತ ಪೂರೈಸಿರುವ ಈ ಚಿತ್ರ ಈಗ ಅಂತಿಮ ಹಂತದ ಟಚ್ ಪಡೆಯುತ್ತಿದೆ. ಬೆರಳೆಣಿಕೆಯಷ್ಟು ಮಂದಿ ಪರಿಚಿತ ಮುಖ ಹಾಗೂ ಹೆಸರು ಬಿಟ್ಟರೆ ಉಳಿದವರೆಲ್ಲಾ ಹೊಸಬರು.
ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿ, ನಂತರ ಕಿರುತೆರೆಯಲ್ಲೂ ಒಂದಿಷ್ಟು ಅನುಭವ ಸಂಪಾದಿಸಿರುವ ಗೋಪಿ ಪೀಣ್ಯ ಚಿತ್ರದ ನಿರ್ದೇಶಕರು. ನಿರ್ಮಾಣದ ಹೊಣೆಯನ್ನು ಸೌರವ್ ಬಾಬು ವಹಿಸಿಕೊಂಡಿದ್ದಾರೆ. ನಿರ್ಮಾಪಕರೇ ಹೀರೋ ಕೂಡಾ. ಇವರಿಗೆ ನಾಯಕಿಯರಾಗಿ ಯಜ್ಞಾಶೆಟ್ಟಿ ಹಾಗೂ ರೀನಾ ಮೆಹತಾ ಇದ್ದಾರೆ. ಶ್ರೀರಾಜು ಎಂಬ ಹೊಸಬರ ಪರಿಚಯವೂ ಈ ಚಿತ್ರದ ಮೂಲಕ ಆಗಲಿದೆಯಂತೆ.
ಸತ್ಯ ಘಟನೆ ಆಧರಿಸಿ ಚಿತ್ರಗಳು ನಿರ್ಮಾಣವಾಗುತ್ತಿರುವುದು ಇತ್ತೀಚೆಗೆ ಹೆಚ್ಚಾಗಿದೆ. ಕೃಷ್ಣನ್ ಲವ್ ಸ್ಟೌರಿ ಕ್ಲಿಕ್ ಆದ ನಂತರವಂತೂ ಈ ಸಾಧ್ಯತೆಗಳಿಗೆ ಹೆಚ್ಚಿನ ಪ್ರಾಧಾನ್ಯ ಸಿಗುತ್ತಿದೆ. ಅದೇ ರೀತಿ ಈ ಚಿತ್ರವೂ ಸತ್ಯ ಘಟನೆ ಆಧಾರಿತ ಚಿತ್ರ. ಮನಸ್ಸಿಗೆ ಹತ್ತಿರವಾದ ಮಾನವ ಸಂಬಂಧಗಳನ್ನು ಎಳೆ ಎಳೆಯಾಗಿ ಕೈಗಿಡುವ ಪ್ರಾಮಾಣಿಕ ಪ್ರಯತ್ನ ಎನ್ನಲಾಗುತ್ತಿದೆ. ಚಿತ್ರವನ್ನು ಸರಳವಾಗಿ ಜನರ ಮುಂದೆ ತಂದಿರುವುದು ಇನ್ನೊಂದ ವಿಶೇಷ ಎಂದು ಹೇಳಲಾಗುತ್ತಿದೆ.
ಮಂಡ್ಯ ಜಿಲ್ಲೆಯ ಕುಗ್ರಾಮದ ಹುಡುಗನೊಬ್ಬ ಎಂಜಿನಿಯರಿಂಗ್ ಓದಿ, ಹಳ್ಳಿ ಸೊಗಡು ಉಳಿಸಿಕೊಂಡು ಅಮೆರಿಕಾಗೆ ಉದ್ಯೋಗ ಅರಸಿ ಹೋಗುತ್ತಾನೆ. ಪಟ್ಟಣ ಎಂದರೆ ಏನು, ಹೇಗಿರಬೇಕು ಎನ್ನುವುದನ್ನು ಅರಿಯದ ಆತ ಅಲ್ಲೇನು ಪಾಡು ಪಡುತ್ತಾನೆ ಎನ್ನುವುದನ್ನು ಚಿತ್ರದಲ್ಲಿ ತೋರಿಸಲಾಗಿದೆಯಂತೆ. ಚಿತ್ರದ ಬಹುಭಾಗ ಅಮೆರಿಕಾದಲ್ಲಿ ಶೂಟ್ ಆಗಿರುವುದು ಇನ್ನೊಂದು ವಿಶೇಷ. ಹೀಗಾಗಿ ಚಿತ್ರತಂಡ ಅಮೆರಿಕಾ ಪ್ರವಾಸ ಮಾಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಚಿತ್ರದಲ್ಲಿ ಜಗ್ಗೇಶ್ ಹಾಗೂ ಕೋಮಲ್ ಸಹೋದದರೂ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ.