ನಿರ್ದೇಶಕ ರವಿ ಶ್ರೀವತ್ಸ ಅವರ ಚಿತ್ರ ಯಾವತ್ತೂ ಬಿಡುಗಡೆಗೆ ಮುನ್ನ ಸುದ್ದಿಯಾಗುತ್ತದೆ. ಆದರೆ ಈ ಬಾರಿ ಬಿಡುಗಡೆಯ ಮೊದಲಿನ ಜೊತೆಗೆ ಬಿಡುಗಡೆ ನಂತರವೂ ಸುದ್ದಿಯಾಗಿದೆ. ಆದರೆ ಇದು ರವಿ ಕಾರಣದಿಂದ ಅಲ್ಲ, ನಿರ್ಮಾಪಕ ಮಂಜುನಾಥ್ ಗೌಡರಿಂದ.
ಹೌದು, ರವಿ ನಿರ್ದೇಶನ ಹಾಗೂ ಮಂಜುನಾಥ್ ನಿರ್ಮಾಣದ ಡೆಡ್ಲಿ-2 ಚಿತ್ರ ಈ ವಾರ ರಾಜ್ಯಾದ್ಯಂತ ತೆರೆ ಕಂಡಿದೆ. ಚಿತ್ರಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆಯೂ ಸಿಕ್ಕಿದೆ. ಆದರೆ, ಆರಂಭದಲ್ಲೇ ವಿಘ್ನವೂ ಎದುರಾಗಿರುವುದು ವಿಪರ್ಯಾಸ.
ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ದೇಶನದ ಪ್ರಕಾರ ಚಿತ್ರವನ್ನು ಬಿಗ್ ಸಿನಿಮಾಸ್ ಮಲ್ಟಿಪ್ಲೆಕ್ಸ್‌ಗಳಲ್ಲಿ ಬಿಡುಗಡೆ ಮಾಡುವಂತಿಲ್ಲ. ಆದರೆ ಗೌಡರು ಚಿತ್ರವನ್ನು ಬಿಗ್ ಸಿನಿಮಾಸ್ ಮೂಲಕವೂ ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಮಂಡಳಿಯ ಗೆರೆಯನ್ನು ದಾಟಿದ್ದಾರೆ. ಮೊದಲೇ ರಿಲಯನ್ಸ್ ಬಿಗ್ ಸಿನಿಮಾಸ್‌ಗೂ, ಮಂಡಳಿಗೂ ಕೋಳಿ ಜಗಳ ನಡೆಯುತ್ತಲೇ ಇದೆ. ಈ ನಡುವೆ ಗೌಡರ ಗಲಾಟೆ ಇನ್ನೇನು ಮಾಡುತ್ತದೆಯೋ ಅಂತ ಗಾಂಧಿನಗರದ ಜನ ಆಡಿಕೊಳ್ಳುತ್ತಿದ್ದಾರೆ.
ಸದ್ಯ ರಾಜರಾಜೇಶ್ವರಿನಗರ ಹಾಗೂ ಮೈಸೂರಿನಲ್ಲಿ ಎರಡು ಮಲ್ಟಿಪ್ಲೆಕ್ಸ್‌ಗಳನ್ನು ಬಿಗ್ ಸಿನಿಮಾಸ್ ಹೊಂದಿದ್ದು, ಈ ಎರಡೂ ಕಡೆ ಡೆಡ್ಲಿ ಬಿಡುಗಡೆ ಆಗಿದೆ. ಮಂಡಳಿಯ ಕಣ್ಣು ಕೆಂಪಾಗಿದೆ. ಅದಕ್ಕೆ ಯಾವ ಕ್ರಮ ಕೈಗೊಳ್ಳುತ್ತದೆಯೋ ಕಾದು ನೋಡಬೇಕು. ಒಟ್ಟಾರೆ ಚಿತ್ರವನ್ನು ಜನ ನೋಡುತ್ತಿದ್ದಾರೆ. ಇಷ್ಟಪಟ್ಟಿದ್ದಾರೆ. ಒಂದು ವರ್ಗದ ಜನರನ್ನು ಇಷ್ಟಪಡಿಸಿರುವ ಚಿತ್ರ ತಕ್ಕ ಮಟ್ಟಿಗೆ ಓಡುವ ಸೂಚನೆ ನೀಡಿದೆ. ವಿವಾದ ಚಿತ್ರಕ್ಕೆ ಹೆಸರು ತರುತ್ತದಾ, ಹಾಳು ಮಾಡುತ್ತದಾ ಅಂತ ಕಾದು ನೋಡಬೇಕಿದೆ.