ಯಶಸ್ವೀ ಚಿತ್ರ 'ಅಂಬಾರಿ'ಯ ನಿರ್ದೇಶಕ ಅರ್ಜುನ್ ಇನ್ನೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಯುವ ನಿರ್ದೇಶಕರಾಗಿ ಅಂಬಾರಿಯನ್ನು ಅತ್ಯುತ್ತಮವಾಗಿ ಕಟ್ಟಿಕೊಟ್ಟಿದ್ದ ಇವರು ಈಗ 'ಅದ್ದೂರಿ'ಯತ್ತ ಮುಖಮಾಡಿದ್ದಾರೆ.
ಚಿತ್ರದ ನಿರ್ಮಾಪಕರು ಶಂಕರ್ ರೆಡ್ಡಿ. ಸರ್ಜಾ ಕುಟುಂಬದ ಇನ್ನೊಂದು ಕುಡಿ ದ್ರುವ ಸರ್ಜಾ ಈ ಚಿತ್ರದ ನಾಯಕ ನಟನಾಗಿ ಪಾದಾರ್ಪಣೆ ಮಾಡಲಿದ್ದಾರೆ. ಜನಪ್ರಿಯ ನಟ ಅರ್ಜುನ್ ಸರ್ಜಾರ ತಂಗಿಯ ಮಗನಾಗಿರುವ ದ್ರುವ್ ಈಗಾಗಲೇ ಸಹಜವಾಗಿಯೇ ಬಹು ನಿರೀಕ್ಷೆಯನ್ನು ಹುಟ್ಟುಹಾಕಿದ್ದಾರೆ. ಜೊತೆಗೆ ಯಶಸ್ವಿ ನಿರ್ದೇಶಕ ಹಾಗೂ ನಿರ್ಮಾಪಕರ ಬಳಗ ಕೂಡಾ ಸಾಕಷ್ಟು ಭರವಸೆಯನ್ನು ಚಿಗುರಿಸಿದ್ದಾರೆ.
ಚಿತ್ರವನ್ನು ಹೆಸರಿನಂತೆಯೇ ಸಾಕಷ್ಟು ಅದ್ದೂರಿಯಾಗಿಯೇ ತೆರೆಗೆ ತರಲು ನಿರ್ಮಾಪಕರು ಹೊರಟಿದ್ದಾರೆ. ನಾಯಕಿಯಾಗಿ ಕನ್ನಡದ ಬಹು ಬೇಡಿಕೆಯ ಹಾಗೂ ಯಶಸ್ವೀ ಪ್ರತಿಭಾವಂತ ನಟಿ ರಾಧಿಕಾ ಪಂಡಿತ್ ಆಯ್ಕೆಯಾಗಿದ್ದಾರೆ. ಚಿತ್ರದ ಮುಹೂರ್ತ ಸದ್ಯವೇ ನಡೆಯಲಿದೆ. ಪ್ರಸ್ತುತ ನಗರದ ಮಿನರ್ವ ಮಿಲ್ನಲ್ಲಿ ಫೋಟೋ ಶೂಟ್ ನಡೆಯುತ್ತಿದೆ.
ವಿಭಿನ್ನ ರೀತಿಯ ಕಾಸ್ಟ್ಯೂಮ್ ಧರಿಸಿ ಫೋಟೊ ಸೆಶನ್ನಲ್ಲಿ ನಾಯಕ ಹಾಗೂ ನಾಯಕಿ ಪಾಲ್ಗೊಂಡಿದ್ದರು. ಹುಡುಗಿ ಜತೆ ಮೊದಲ ಬಾರಿಗೆ ಫೋಟೋ ಸೆಶನ್ನಲ್ಲಿ ಪಾಲ್ಗೊಂಡಿದ್ದೇನೆ. ಒಂಥರಾ ಭಯ ಆಗ್ತಿದೆ. ಸದ್ಯದ ಕನ್ನಡದ ಜನಪ್ರಿಯ ನಟಿ ಜತೆ ನಟಿಸುತ್ತಿರುವುದಕ್ಕೆ ಹೆಮ್ಮೆಯೂ ಇದೆ ಎನ್ನುತ್ತಾರೆ ದ್ರುವ.
ಅಭಿನಯದಲ್ಲಿ ಒಂದಿಷ್ಟು ಕಲಿತಿರುವ ದ್ರುವ ಒಬ್ಬ ಒಳ್ಳೆ ಡಾನ್ಸರ್ ಕೂಡಾ ಹೌದು. ಇದು ಚಿತ್ರದ ಆರಂಭಿಕ ಝಲಕ್ ಅಷ್ಟೇ. ಶೂ ಲೇಸನ್ನು ಕತ್ತಿಗೆ ಧರಿಸಿ ದ್ರುವ ಫೋಟೋಗೆ ಫೋಸ್ ನೀಡಿದರು. ಇದ್ಯಾಕೆ ಹಿಂಗೆ ಅಂದಾಗ 'ಜನ ಚೇಂಜ್ ಬಯಸ್ತಾರೆ' ಅಂದರು.