ಭಟ್ಟರ ಬಹುನಿರೀಕ್ಷೆಯ ಪಂಚರಂಗಿ ಧ್ವನಿಸುರುಳಿ ಮಾರುಕಟ್ಟೆಗೆ
PR
ಮುಂಗಾರು ಮಳೆ ಖ್ಯಾತಿಯ ಜನಪ್ರಿಯ ನಿರ್ದೇಶಕ ಯೋಗರಾಜ್ ಭಟ್ ಇದೀಗ ಮನಸಾರೆಯ ಸಾಧಾರಣ ಯಶಸ್ಸಿನ ನಂತರ ಅತ್ಯಂತ ಮುತುವರ್ಜಿಯಿಂದ ಪಂಚರಂಗಿ ನಿರ್ದೇಶಿಸಿದ್ದಾರೆ. ಈ ಚಿತ್ರದ ಮೂಲಕ ನಿರ್ಮಾಪಕನಾಗಿಯೂ ಭಡ್ತಿ ಪಡೆದಿರುವ ಭಟ್ಟರು ಪಂಚರಂಗಿಯ ಆಡಿಯೋಗಳನ್ನು ಹೊರಬಿಟ್ಟಿದ್ದಾರೆ. ಬಿಡುಗಡೆಗೂ ಮುನ್ನವೇ ಲೈಫು ಇಷ್ಟೇನೇ... ಹುಡುಗರು ಬೇಕು ಕುರಿಯ ಮರಿ ಥರ... ಮತ್ತಿತರ ಹಾಡುಗಳು ಈಗಾಗಲೇ ಜನಪ್ರಿಯವಾಗಿದ್ದು, ಅಧಿಕೃತವಾಗಿ ಈ ಹಾಡುಗಳ ಬಿಡುಗಡೆ ಕಾರ್ಯಕ್ರಮ ಇತ್ತಾಚೆಗೆ ನಟ ಪುನೀತ್ರಾಜ್ ಕುಮಾರ್ರಿಂದ ನಡೆಯಿತು.
ಈ ಚಿತ್ರಕ್ಕೆ ನಿರ್ಮಾಪಕರೂ ಸಹ ಆಗಿರುವ ಭಟ್ಟರು ಏನು ಮಾಡಿದರೂ ಢಿಪರಂಟು. ಹಾಗಾಗಿ ಸಹಜವಾಗಿಯೇ ಅವರ ಕ್ರಿಯೇಟಿವಿಟಿಯ ಬಗ್ಗೆ ಸಾಕಷ್ಟು ನಿರೀಕ್ಷೆ ಹೊತ್ತಿರುವ ಪ್ರೇಕ್ಷಕರರು ಇದೀಗ ಪಂಚರಂಗಿಗಾಗಿ ಕಾಯುತ್ತಿದ್ದಾರೆ. ಭಟ್ಟರೂ ಅಷ್ಟೇ ಪಂಚರಂಗಿ ಬಗ್ಗೆ ಸಾಕಷ್ಟು ನಿರೀಕ್ಷೆ ಹೊತ್ತಿದ್ದಾರೆ. ಸಾಮಾನ್ಯವಾಗಿ ತನ್ನ ಬಗ್ಗೆ ಚಿತ್ರ ಬಿಡುಗಡೆಗೂ ಮೊದಲೇ ಹೆಚ್ಚಾಗಿ ಹೊಗಳಿಕೊಳ್ಳಲಿಚ್ಚಿಸದ ಭಟ್ಟರು ಈ ಬಾರಿ ಮನಸಾರೆ ಚಿತ್ರಕ್ಕಿಂತಲೂ ಕೊಂಚ ಹೆಚ್ಚೇ ಆತ್ಮವಿಶ್ವಾಸದಿಂದಿದ್ದಾರೆ ಅಂದರೆ ಪ್ರೇಕ್ಷಕನೂ ಕೂಡಾ ಹೆಚ್ಚು ನಿರೀಕ್ಷಿಸಿದರೆ ತಪ್ಪಿಲ್ಲ.
ಸಮಾರಂಭದಲ್ಲಿ ಎಲ್ಲಕ್ಕಿಂತ ಮುಖ್ಯವಾಗಿ ಸೋನು ನಿಗಮ್ ಎಲ್ಲರ ಆಕರ್ಷಣೆಯಗಿ ಕಾಣಿಸಿಕೊಂಡರು. ಡಿಫರೆಂಟ್ ಆಗಿ ಕೂದಲು ಬಿಟ್ಟ ಹೊಸ ಲುಕ್ನೊಂದಿಗೆ ಸೋನು ನಿಗಮ್ ಒಂದು ಹಾಡನ್ನೂ ಹಾಡಿ ರಂಜಿಸಿದರು. ಭಟ್ಟರ ಪರಮಾಪ್ತ ಗೆಳೆಯ ದುನಿಯಾ ಸೂರಿ ಸಹ ಇದ್ದರು ಅಂತ ವಿವರಿಸಿ ಹೇಳುವ ಅಗತ್ಯವಿಲ್ಲ. ಇವರೊಂದಿಗೆ ನಟ ರಾಘವೇಂದ್ರ ರಾಜ್ ಕುಮಾರ್ ಇದ್ದರು. ಚಿತ್ರದ ನಟ ನಟಿಯರೂ ಕೂಡಾ ಹಾಜರಿದ್ದರು.
ಒಟ್ಟಾರೆ ಅಚ್ಚುಕಟ್ಟುತನಕ್ಕೆ ಭಟ್ಟರು ಹೆಸರುವಾಸಿ. ಅದನ್ನು ಆಡಿಯೊ ಬಿಡುಗಡೆ ಸಮಾರಂಭದಲ್ಲೂ ತೋರಿಸಿದರು. ಚಿತ್ರದ ಹಾಡಿಗೆ ಭಟ್ಟರ ಜೊತೆಗೆ ಎಂದಿನಂತೆ ಜಯಂತ್ ಕಾಯ್ಕಿಣಿ ಸಹ ಜೀವ ತುಂಬಿದ್ದಾರೆ. ಚಿತ್ರಕ್ಕೆ ಮನೋಮೂರ್ತಿ ಅವರ ಸಂಗೀತವಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ತೆರೆ ಕಾಣುವ ಸಾಧ್ಯತೆಗಳಿವೆ. ಮತ್ತೊಮ್ಮೆ ಮುಂಗಾರು ಸುರಿಯುವ ಸಾಧ್ಯತೆ ನಿಚ್ಚಳವಾಗಿದೆ. ಮಳೆ ಮೇನಿಯಾದಿಂದ ಮನಸಾರೆಯ ಮೂಲಕ ಹೊರ ಬಂದಿರುವ ಭಟ್ಟರು, ಇದ್ಯಾವ ರೀತಿ ಚಿತ್ರ ಸಿದ್ಧಪಡಿಸಿದ್ದಾರೆ ಅನ್ನುವ ಕುತೂಹಲ ಅಭಿಮಾನಿಗಳಿಗೆ ಮಾತ್ರವಲ್ಲ, ಬಹುತೇಕ ಎಲ್ಲರಿಗೂ ಇದ್ದೇ ಇದೆ. ದಿಗಂತ್, ನಿಧಿ ಸುಬ್ಬಯ್ಯ ಜೊಡಿಯ ಜೊತೆಗೆ ಎಂದಿನಂತೆ ಅನಂತನಾಗ್, ಪದ್ಮಜಾ ರಾವ್ ತಂಡವೂ ಚಿತ್ರದಲ್ಲಿದೆ. ಅಭಿಮಾನಿಗಳ ನಿರೀಕ್ಷೆ ಹುಸಿಯಾಗದಿರಲಿ ಅಂತ ಆಶಿಸೋಣ.