'ಶಾಪ'ಗ್ರಸ್ತರಾಗಿದ್ದ ನಿರ್ದೇಶಕ ಅಶೋಕ್ ಪಾಟೀಲ್ ಬಹುಕಾಲದ ವಿರಾಮದ ನಂತರ ಮರಳಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ತಾವೇ ನಿರ್ದೇಶನವನ್ನು ಮಾಡಲೂ ಮುಂದಾಗಿದ್ದಾರೆ.
ಚಿತ್ರಕ್ಕೆ ಇನ್ನು ಹೆಸರಿಡುವ ಕಾರ್ಯ ಅಗಿಲ್ಲ. ಕಿಶೋರ್ ಚಿತ್ರದ ನಾಯಕರಾಗಿ ಆಯ್ಕೆಯಾಗಿದ್ದು ಖಚಿತವಾಗಿದೆ. ಇವರ ಜತೆ ಜನಪ್ರಿಯ ನಟ ಬಿ.ಸಿ. ಪಾಟೀಲ್ ಸಹ ಕಾಣಿಸಿಕೊಳ್ಳಲಿದ್ದಾರೆ. ಇವರು ಹಾಗೆ ಬಂದು ಹೀಗೆ ಹೋಗುವುದಿಲ್ಲ. ಒಂದು ದೊಡ್ಡ ಹಾಗೂ ಉತ್ತಮ ಪಾತ್ರವನ್ನೇ ನೀಡಲಾಗಿದೆಯಂತೆ. ಇನ್ನು ನಟಿಯ ಹುಡುಕಾಟ ಸಹ ನಡೆದಿದೆ.
ಚಿತ್ರವನ್ನು ಹಾಸ್ಯ ಪ್ರಧಾನವಾಗಿ ನಿರ್ಮಿಸಲು ನಿರ್ದೇಶಕರು ಯೋಜಿಸಿದ್ದು, ಇದಕ್ಕಾಗಿ ಅತ್ಯುತ್ತಮ ಹಾಸ್ಯ ಕಲಾವಿದರನ್ನು ಒಟ್ಟುಗೂಡಿಸುವ ಕಾರ್ಯದಲ್ಲಿ ಇವರು ನಿರತರಾಗಿದ್ದಾರೆ. ಚಿತ್ರದ ಇನ್ನೊಂದು ವಿಶೇಷ ಅಂದರೆ ಇದು ನೂರಕ್ಕೆ ನೂರು ಪಕ್ಕಾ ಸ್ವಮೇಕ್ ಎಂಬುದು ಅಶೋಕ್ ಅಂಬೋಣ.
ಚಿತ್ರದಲ್ಲಿ ಪ್ರೀತಿ, ಪ್ರೇಮ, ಕಾಮಿಡಿ, ಥ್ರಿಲ್ಲರ್ ಜತೆ ಸಾಕಷ್ಟು ಸೆಂಟಿಮೆಂಟ್ ಸಹ ಇರಲಿದೆಯಂತೆ. ನಾಲ್ಕೈದು ಪಾತ್ರಗಳ ನಡುವೆ ಸುತ್ತುವ ಕಥೆ ಇದಾಗಿದ್ದು, ಅದಕ್ಕಾಗಿ ಆ ನಾಲ್ಕೈದು ಪಾತ್ರವೇ ಇಡೀ ಚಿತ್ರಕ್ಕೆ ಜೀವಾಳ ಎನ್ನುತ್ತಾರೆ ಅಶೋಕ್. ಅಂದಹಾಗೆ ಈ ಚಿತ್ರ ಕೇವಲ ಮೂರು ಗಂಟೆಯಲ್ಲಿ ನಡೆಯುವ ಘಟನೆಯನ್ನು ಆಧರಿಸಿ ಇರುವ ಚಿತ್ರವಂತೆ.
ಚಿತ್ರದ ಚಿತ್ರೀಕರಣ ಬೆಂಗಳೂರು ನಗರ ಹಾಗೂ ಸುತ್ತಲಿನ ತಾಣದಲ್ಲಿ ನಡೆಯಲಿದೆ. ಚಿತ್ರಕ್ಕೆ ಸಾಯಿ ಕಾರ್ತಿಕ್ ಸಂಗೀತ ನಿರ್ದೇಶನ ಸಿಕ್ಕಿದೆ. ಇವರು ಈಗಲೇ ಎರಡು ಹಾಡನ್ನು ಸಿದ್ಧಪಡಿಸಿ ರೆಡಿ ಆಗಿ ಬಿಟ್ಟಿದ್ದಾರೆ. ನಿರಂಜನ್ ಬಾಬು ಕೈಗೆ ಕ್ಯಾಮರಾ ಹಿಡಿಸಲು ನಿರ್ದೇಶಕರು ಯೋಜಿಸಿದ್ದಾರೆ. ಚಿತ್ರದ ಬಹುತೇಕ ಭಾಗ ರಾತ್ರಿಯೇ ಇರುವುದರಿಂದ ಚಿತ್ರದ ಚಾಯಾಗ್ರಾಹಕರಿಗೆ ಕಠಿಣ ಕೆಲಸ ಇರುತ್ತದೆ ಎನ್ನುತ್ತಾರೆ ನಿರ್ದೇಶಕರು.