ಸುಖಾಂತ್ಯವಾದ ಕೂಲ್; ಗಣೇಶ್ ನಿರ್ದೇಶಕ್ಕೆ ಗ್ರೀನ್ ಸಿಗ್ನಲ್
MOKSHA
ಕೂಲ್- ಸಕತ್ ಹಾಟ್ ಮಗಾ ಚಿತ್ರಕ್ಕೆ ಸಂಬಂಧಿಸಿದಂತೆ ನಿರ್ಮಾಪಕಿ ಶಿಲ್ಪಾ ಗಣೇಶ್ ಹಾಗೂ ನಿರ್ದೇಶಕ ಮುಸ್ಸಂಜೆ ಮಹೇಶ್ ನಡುವೆ ಇದ್ದ ಭಿನ್ನಾಭಿಪ್ರಾಯಕ್ಕೆ ಕರ್ನಾಟಕ ಚಲನಚಿತ್ರ ಮಂಡಳಿ ಕೊನೆಗೂ ತೆರೆ ಎಳೆದಿದೆ.
ಮುಸ್ಸಂಜೆ ಮಹೇಶ್ ಹಾಗೂ ರತ್ನವೇಲು ನಡುವೆ ಅಂಥಾ ಗಂಭೀರ ಜಗಳವೇನೂ ಆಗಿಲ್ಲ. ಅದು ಚಿತ್ರದ ಗುಣಮಟ್ಟಕ್ಕೆ ಸಂಬಂಧಿಸಿದ ಸಣ್ಣ ಸಮಸ್ಯೆ ಅಷ್ಟೇ. ಈಗ ಇಬ್ಬರಿಗೂ ಸಮಾಧಾನವಾಗುವಂತೆ ಸಮಸ್ಯೆ ಬಗೆಹರಿದಿದೆ ಎಂಬು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಸಂತ್ ಕುಮಾರ್ ಪಾಟೀಲ್ ಹೇಳಿದರು.
ಮುಸ್ಸಂಜೆ ಮಹೇಶ್ ಕೂಡಾ ಇದೇ ಸಂದರ್ಭ ಮಾತನಾಡಿ, ಈಗಿನ ತೀರ್ಪಿನ ಪ್ರಕಾರ, ನನಗೆ ನಿರ್ಮಾಪಕರು 2 ಲಕ್ಷ ರೂ ನೀಡಬೇಕು. ಆದರೆ ನಾನು ಚಿತ್ರೀಕರಣ ಸಂದರ್ಭ ಒಂದು ಲಕ್ಷ ರೂ ಪಡೆದಿದ್ದೆ. ಹೀಗಾಗಿ ನನಗೆ ಉಳಿದ ಒಂದು ಲಕ್ಷ ರೂಪಾಯಿ ಬೇಡ. ನನಗೆ ಈವರೆಗೆ ಸಿಕ್ಕ ಮರ್ಯಾದೆಯೇ ಸಾಕು ಎಂದಿದ್ದಾರೆ!
ಶಿಲ್ಪಾ ಗಣೇಶ್ ಮಾತನಾಡಿ, ನಮ್ಮ ಚಿತ್ರದಲ್ಲಿ ಎಲ್ಲರಿಗೂ ಸ್ವಾತಂತ್ರ್ಯವಿತ್ತು. ಆದರೆ ಕೆಲಸದ ವಿಚಾರದಲ್ಲಿ ಕೊಂಚ ಭಿನ್ನಾಭಿಪ್ರಾಯ ಮೂಡಿತು ಅಷ್ಟೆ. ಹೊಂದಾಣಿಕೆಯಿಲ್ಲದ್ದರಿಂದ ಹೀಗಾಯಿತು. ಈಗಿನ ತೀರ್ಪಿಗೆ ನನ್ನ ಸಹಮತವಿದೆ ಎಂದರು.
MOKSHA
ಘಟನೆಯ ಹಿನ್ನೆಲೆ: ಛಾಯಾಗ್ರಾಹಕ ರತ್ನವೇಲು ತನ್ನ ನಿರ್ದೇಶನ ಶೈಲಿಗೆ ಒಗ್ಗುತ್ತಿಲ್ಲ ಹಾಗೂ ತನಗೆ ಸಹಕರಿಸುತ್ತಿಲ್ಲ ಎಂಬ ಕಾರಣ ನೀಡಿ ನಿರ್ದೇಶಕ ಮುಸ್ಸಂಜೆ ಮಹೇಶ್ ಅವರು ಚಿತ್ರದ ಶೂಟಿಂಗ್ ನಡುವೆಯೇ ಹೊರನಡೆದಿದ್ದರು. ರತ್ನವೇಲು ಜೊತೆ ಸಹಕರಿಸಲು ಸಾಧ್ಯವಿಲ್ಲದಿದ್ದರೆ ಗೆಟ್ ಔಟ್ ಎಂಬ ಮಾತನ್ನು ನಿರ್ಮಾಪಕಿ ಶಿಲ್ಪಾ ಗಣೇಶ್ ಹೇಳಿದ್ದರೆಂದೂ ಮುಸ್ಸಂಜೆ ಮಹೇಶ್ ಹೇಳಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ಸಭೆ ಕರೆದು ಗಣೇಶ್ ನಿರ್ದೇಶನ ಮುಂದುವರಿಸುವುದರೊಂದಿಗೆ ಮುಸ್ಸಂಜೆ ಮಹೇಶ್‌ಗೆ ಎರಡು ಲಕ್ಷ ರೂ ಹಣ ನೀಡಬೇಕೆಂದು ಹೇಳಿತ್ತು. ಆದರೆ ಆಗಲೇ ಬಗೆಹರಿಯಿತೆಂದು ಕಂಡ ಈ ವಿವಾದ ಬಗೆಹರಿದಿರಲಿಲ್ಲ.
ಮುಸ್ಸಂಜೆ ಮಹೇಶ್, ಗಣೇಶ್‌ಗೆ ನಿರ್ದೇಶನ ಮಾಡಲು ನಾನು ಇನ್ನೂ ನನ್ನ ಸಹಮತ ವ್ಯಕ್ತಪಡಿಸಿಲ್ಲ ಎಂದು ಅಪಸ್ವರವೆತ್ತಿದ್ದರು. ಮಂಡಳಿಯ ತೀರ್ಪಿಗೆ ನಿರ್ದೇಶಕರ ಸಂಘದ ತಗಾದೆಯೂ ಇತ್ತು. ಹೀಗಾಗಿ ವಿವಾದ ಬಗೆಹರಿದಂತೆ ಕಂಡರೂ ಹೊಗೆಯಾಡುತ್ತಲೇ ಇತ್ತು.
ಹೀಗಾಗಿ ಪ್ರಕರಣವನ್ನು ಮತ್ತೆ ವಾಣಿಜ್ಯ ಮಂಡಳಿ ಕೈಗೆತ್ತಿಕೊಂಡು ಇದೀಗ ಸಮಸ್ಯೆ ಪೂರ್ಣ ಬಗೆಹರಿದಿದೆ ಎಂದಿದೆ. ಸ್ವತಃ ವಾಣಿಜ್ಯ ಮಂಡಳಿ ಅಧ್ಯಕ್ಷ ಬಸಂತ್ ಕುಮಾರ್ ಪಾಟೀಲ್ ಪತ್ರಿಕಾಗೋಷ್ಠಿ ಕರೆದು ಶಿಲ್ಪಾ ಗಣೇಶ್ ಹಾಗೂ ಮುಸ್ಸಂಜೆ ಮಹೇಶ್ ಅವರ ಕೈಗಳನ್ನು ಬೆಸೆದು ಹಳೆಯದೆಲ್ಲವನ್ನೂ ಮರೆಯಲಾಗಿದೆ ಎಂದಿದ್ದಾರೆ. ಒಟ್ಟಾರೆ ಈ ಎಲ್ಲ ವಿವಾದದ ನೆಪದಲ್ಲಿ ಗಣೇಶ್ ಮಾತ್ರ ನಿರ್ದೇಶಕನ ಸ್ಥಾನದಲ್ಲಿ ಕೂತಿರುವುದು ಸುಳ್ಳಲ್ಲ. ಗಣೇಶ್ ನಿರ್ದೇಶನದಲ್ಲಿ ಗೆಲ್ಲುತ್ತಾರಾ?.. ಪ್ರಶ್ನೆಗೆ ಉತ್ತರ ಸಿಗಲು ಕಾಯಬೇಕಿದೆ.