'ಕಾಲೇಜು ಜನರೇಷನ್ ಯಾರ ಮಾತೂ ಕೇಳಲ್ಲ... ಹಾರ್ಟಲ್ಲಿ ವೈಬ್ರೇಷನ್ ಎಂದಿಗೂ ಮುಗಿಯಲ್ಲಾ...' ಅನ್ನೋ ಹಾಡಿಗೆ ದೂದ್ ಪೇಡಾ ದಿಗಂತ್ ನಟಿ ರೂಪಶ್ರೀ ಜತೆ ಹೆಜ್ಜೆ ಹಾಕುತ್ತಿದ್ದರೆ, ಎಲ್ಲರಿಗೂ ಕಾಲೇಜು ದಿನ ನೆನಪಾಗುತ್ತಿತ್ತು.
ನಂದಿಬೆಟ್ಟದ ತಪ್ಪಲಿನಲ್ಲಿ ನಡೆಯುತ್ತಿರುವ ಪುತ್ರ ಚಿತ್ರದ ಚಿತ್ರೀಕರಣ ಸನ್ನಿವೇಶಗಳಿದು. ರಾಂನಾರಾಯಣ್ ಬರೆದಿರುವ ಈ ಹಾಡಿಗೆ ದಿಗಂತ್ ಹಾಗೂ ರೂಪಶ್ರೀ ವಿಶಿಷ್ಟ ರೀತಿಯಲ್ಲಿ ಹೆಜ್ಜೆ ಹಾಕಿ ಗಮನ ಸೆಳೆದರು. ರಾಜಾ ನೃತ್ಯ ನಿರ್ದೇಶನದಲ್ಲಿ ಈ ಹಾಡು ಮೂಡಿ ಬಂತು. ಈ ಹಾಡಿನೊಂದಿಗೆ ಚಿತ್ರದ ಚಿತ್ರೀಕರಣವೂ ಪೂರ್ಣಗೊಂಡಿದ್ದು, ಶೀಘ್ರವೇ ತೆರೆಗೆ ಬರಲು ಚಿತ್ರ ಸಜ್ಜಾಗುತ್ತಿದೆ. ಅಂತಿಮ ಕ್ಷಣದ ಚಿತ್ರೀಕರಣ ಹಾಗೂ ಎಡಿಟಿಂಗ್ ಬಾಕಿ ಇದ್ದು, ಶೀಘ್ರವೇ ತೆರೆಗೆ ಬರುವ ಸಾಧ್ಯತೆ ತೋರುತ್ತಿದೆ.
ಚಿತ್ರದ ಚಿತ್ರೀಕರಣ ಬೆಂಗಳೂರು, ಮೈಸೂರು, ನಂದಿಬೆಟ್ಟ ಸೇರಿದಂತೆ ಹಲವೆಡೆ ನಡೆದಿದ್ದು, ಚಿತ್ರ ನಿರ್ಮಿಸುತ್ತಿರುವ ಟಿ. ಸತ್ಯನಾರಾಯಣ ಅವರಿಗೆ ಸಾಕಷ್ಟು ನಿರೀಕ್ಷೆಗಳನ್ನು ಹೊತ್ತುಕೊಳ್ಳುವಂತೆ ಮಾಡಿದೆ. ಆರು ಹಾಡುಗಳಿರುವ ಈ ಚಿತ್ರಕ್ಕೆ ರಮೇಶ್ ರಾಜಾ ಸಂಗೀತ ನೀಡಿದ್ದಾರೆ. ರವಿ ಸುವರ್ಣ ಛಾಯಾಗ್ರಹಣ ನಿರೀಕ್ಷೆಗೂ ಮೀರಿ ಉತ್ತಮವಾಗಿ ಬಂದಿದೆ ಎನ್ನಲಾಗುತ್ತಿದೆ. ಸದ್ಯ ಯೋಗರಾಜ ಭಟ್ಟರ ಪಂಚರಂಗಿ ಚಿತ್ರದಲ್ಲೂ ನಾಯಕನಾಗಿ ನಟಿಸಿರುವ ದಿಗಂತ್ ಮನಸಾರೆಯ ನಂತರ ಮತ್ತೊಂದು ಯಶಸ್ಸನ್ನು ಎದುರು ನೋಡುತ್ತಿದ್ದಾರೆ. ಯಶಸ್ವೀ ಚಿತ್ರಗಳನ್ನು ನೀಡಿದರೂ, ಅಂಥ ಹವಾ ಸೃಷ್ಟಿಸಿದ ದಿಗಂತ್‌ಗೆ ಇನ್ನಾದರೂ ಝಗಮಗಿಸುವ ದಿನಗಳು ಬರಲಿ ಎಂದು ಹಾರೈಸೋಣ.