ಸಿಲ್ಲಿ ಲಲ್ಲಿಯ ಸಮಾಜ ಸೇವಕಿ ಲಲಿತಾಂಬಾ ಯಾರಿಗೆ ಗೊತ್ತಿಲ್ಲ ಹೇಳಿ. ಹೌದು, ಅದೇ ಲಲ್ಲಿಯಾಗಿದ್ದ ಮಂಜುಭಾಷಿಣಿ ಕೆಲಕಾಲ ಸುದ್ದಿಯೇ ಇರಲಿಲ್ಲ. ಕಿರುತೆರೆಯಲ್ಲಿ ಅತ್ಯಂತ ಜನಪ್ರಿಯರಾಗಿದ್ದ ಮಂಜುಭಾಷಿಣಿ ಕೊಂಚ ಸಣ್ಣಗಾಗಿದ್ದು, ಮತ್ತೆ ಕಿರುತೆರೆಗೆ ಮರಳುವ ಸೂಚನೆ ನೀಡಿದ್ದಾರೆ. ಮಗು ಆಗಿದ್ದರಿಂದ ಕೆಲಕಾಲ ಎಲ್ಲಾ ಕೆಲಸದಿಂದ ವಿರಾಮ ಪಡೆದು, ಆರೈಕೆಯಲ್ಲಿ ತೊಡಗಿದ್ದ ಇವರು ಇದೀಗ ಮತ್ತೆ ಮರಳುತ್ತಿದ್ದಾರೆ.
ಭೂಮಿಗೀತ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಇವರು ಗಿರೀಶ್ ಕಾರ್ನಾಡರ ಅಂತರಾಳ ಧಾರಾವಾಹಿ ಮೂಲಕ ಕಿರುತೆರೆಗೆ ಪ್ರವೇಶ ಪಡೆದಿದ್ದರು. ಟಿ.ಎನ್. ಸೀತಾರಾಂ ಅವರ ಮಾಯಾಮೃಗ ಧಾರವಾಹಿ ಮೂಲಕ ಗಮನ ಸೆಳೆದ ಇವರಿಗೆ ಪ್ರಸಿದ್ಧಿಯ ಉತ್ತುಂಗಕ್ಕೇರಿಸಿದ್ದು ಸಿಲ್ಲಿ ಲಲ್ಲಿ ಎಂದರೆ ತಪ್ಪಿಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ 'ಸಮಾಜ ಸೇವಕಿ ಲಲಿತಾಂಬಾ' ಅನ್ನುವ ಮಟ್ಟಿಗೆ ಹೆಸರು ತಂದುಕೊಟ್ಟಿದ್ದು ಈ ಧಾರಾವಾಹಿ. ಸುಗ್ರೀವ ಚಿತ್ರದಲ್ಲಿ ಚಿಕ್ಕದೊಂದು ಪಾತ್ರದಲ್ಲಿ ನಟಿಸಿದ್ದರು. ಸಾಕಷ್ಟು ಚಿತ್ರಗಳಲ್ಲಿ ಇವರು ನಟಿಸಿದ್ದಾರೆ. ಆದರೆ ಗುರುತಾಗಿರುವುದು ಮಾತ್ರ ಕಿರುತೆರೆಯಿಂದಲೇ.
ಇವರಿಗೆ ಮಸಾಲೆ ದೋಸೆ, ಇಡ್ಲಿ ಅಂದರೆ ವಿಪರೀತ ಇಷ್ಟವಂತೆ. ತಿನ್ನುವುದು ಅಂದರೆ ಪ್ರೀತಿ ಅನ್ನುವ ಇವರಿಗೆ ಓದುವ ಹುಚ್ಚೂ ಇದೆ. ಜತೆಗೆ ಶಾಸ್ತ್ತ್ರೀಯ ಸಂಗೀತವನ್ನೂ ಒಂದಿಷ್ಟು ಅರಗಿಸಿಕೊಂಡಿದ್ದಾರೆ. ಹೊಸ ಟ್ರೆಂಡ್ ಬಗ್ಗೆ ಹೆಚ್ಚು ಗಮನ ಹರಿಸುವ ಇವರು, ಧಾರಾವಾಹಿ ಕ್ಷೇತ್ರದಲ್ಲಿ ಅಷ್ಟೇನು ಬದಲಾವಣೆ ಆಗಿಲ್ಲ. ಒಗ್ಗಿಕೊಳ್ಳಲು ತೊಂದರೆ ಆಗದು ಎನ್ನುತ್ತಾರೆ. ಒಟ್ಟಾರೆ ಮತ್ತೆ ಕಿರುತೆರೆಗೆ ಮರಳಲಿರುವ ಇವರು ಇನ್ನಷ್ಟು ನಗಿಸಲಿ ಅಂತ ಆಶಿಸೋಣ.