ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ತಮಿಳಿನ ಸಿಂಗಂ 'ಕೆಂಪೇಗೌಡ'ನಾದ!: ಸುದೀಪ್ ರಿಮೇಕಿಸಂ (Sudeep | Kempe Gowda | Singam | Vishnuvardhana)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಇತ್ತೀಚೆಗಷ್ಟೇ ದ್ವಾರಕೀಶ್‌ರ ಚಿತ್ರವೊಂದಕ್ಕೆ ವಿಷ್ಣುವರ್ಧನ ಎಂದು ಹೆಸರಿಡಲು ಹೋಗಿ ವಿವಾದ ಎಬ್ಬಿಸಿದ್ದ ಕಿಚ್ಚ ಸುದೀಪ್ ಈಗ ಮತ್ತೊಂದು ಚಿತ್ರಕ್ಕೆ ಸದ್ದಿಲ್ಲದೆ ಸಹಿ ಮಾಡಿದ್ದಾರೆ. ಚಿತ್ರದ ಹೆಸರು ಕೆಂಪೇಗೌಡ!

ಹೌದು. ಆದರೆ, ಸುದೀಪ್ ಖಂಡಿತವಾಗಿಯೂ ಪೌರಾಣಿಕ ಚಿತ್ರ ಮಾಡುತ್ತಿಲ್ಲ. ಬೆಂಗಳೂರು ನಿರ್ಮಾತೃ ಕೆಂಪೇಗೌಡರಿಗೂ ಈ ಚಿತ್ರಕ್ಕೂ ಕೂದಲೆಳೆಯಷ್ಟೂ ಸಂಬಂಧ ಇಲ್ಲ. ಆದರೆ ಸುದೀಪ್ ಮಾತ್ರ ಈ ಚಿತ್ರಕ್ಕೆ ಕೆಂಪೇಗೌಡ ಎಂದು ಹೆಸರಿಟ್ಟಿದ್ದಾರೆ. ಅಂದೊಮ್ಮೆ ಸಂಬಂಧವೇ ಇಲ್ಲದ ಕಥೆಗೆ ವೀರಮದಕರಿ ಎಂದು ಹೆಸರಿಟ್ಟು ಗೆದ್ದಿರುವ ಸುದೀಪ್ ಇದೀಗ ಮತ್ತೆ ಸಂಬಂಧವಿಲ್ಲದ ಚಿತ್ರಕ್ಕೆ ಕೆಂಪೇಗೌಡ ಎಂದು ಹೆಸರಿಟ್ಟು ಅದೇ ತಂತ್ರ ಮತ್ತೆ ಪ್ರಯೋಗಿಸಿದ್ದಾರೆ ಎಂದರೆ ಸುಳ್ಳಲ್ಲ. ಅಷ್ಟಾಗಿಯೂ ಈ ಕೆಂಪೇಗೌಡ ಚಿತ್ರದ ಕಥೆಯೇನು ಅಂತೀರಾ? ಅಂಥಾದ್ದೇನಿಲ್ಲ ಬಿಡಿ. ಇದು ಪಕ್ಕಾ ತಮಿಳಿನ ಸೂರ್ಯ ಅಭಿನಯದ ಸಿಂಗಂ ಚಿತ್ರದ ರಿಮೇಕ್!

ಹೌದು. ಸಿಂಗಂ ಚಿತ್ರದ ರಿಮೇಕ್ ಹಕ್ಕನ್ನು ಪಡೆಯಲು ಕೆಲ ದಿನಗಳ ಹಿಂದೆ ದರ್ಶನ್ ಹಾಗೂ ಸುದೀಪ್ ತೆರೆಮರೆಯಲ್ಲೇ ಪೈಪೋಟಿ ನಡೆಸಿದ್ದರು. ಇದೀಗ ಹಕ್ಕು ಸುದೀಪ್ ಪಾಲಿಗೆ ದಕ್ಕಿದೆ. ಸುದೀಪ್ ಈ ಚಿತ್ರಕ್ಕೆ ಕೆಂಪೇಗೌಡ ಎಂದು ಹೆಸರಿಟ್ಟೂ ಆಗಿದೆ. ಜಸ್ಟ್ ಮಾತ್ ಮಾತಲ್ಲಿ ಎಂಬ ಸ್ವಮೇಕ್ ಚಿತ್ರ ನಿರ್ದೇಶಿಸಿ ಸೋತಿದ್ದ ಸುದೀಪ್ ಈ ಚಿತ್ರವನ್ನು ಗೆಲ್ಲಿಸುವ ಮೂಲಕ ನಿರ್ಮಾಪಕ ಶಂಕರೇಗೌಡರಿಗೆ ಗೆಲುವು ತಂದುಕೊಡುವ ಭರವಸೆ ನೀಡಿದ್ದಾರೆ.

ಈಗಾಗಲೇ ಸುದೀಪ್ ಕನ್ನಡದ ಹಳೆಯ ಚಿತ್ರ 'ಅಂತ'ದ ರಿಮೇಕ್ ಆಗಿರುವ ಕನ್ವರ್‌ಲಾಲ್ ಎಂಬ ಚಿತ್ರವನ್ನೂ ಶಂಕರೇಗೌಡರಿಗಾಗಿ ಮಾಡುತ್ತಿದ್ದಾರೆ. ಇದೀಗ ಈ ಪ್ರಾಜೆಕ್ಟನ್ನೂ ಕೈಗೆತ್ತಿಕೊಂಡಿದ್ದಾರೆ.

ಇನ್ನೂ ಒಂದು ವಿಶೇಷವೆಂದರೆ, ಸಿಂಗಂ ಚಿತ್ರ ಸುದೀಪ್ ಈಗಾಗಲೇ ನಟಿಸಿದ ತಿರುಪತಿ ಚಿತ್ರದ ಕಥೆಯಂತೆಯೇ ಇದೆ. ಆದರೂ ಸುದೀಪ್ ಮತ್ತೆ ಸುದೀಪ್ ಸಿಂಗಂ ಚಿತ್ರವನ್ನು ಕೆಗೆತ್ತಿಕೊಂಡಿರುವುದು ವಿಶೇಷ. ಒಟ್ಟಾರೆ, ಈಗಾಗಲೇ ನಿರ್ದೇಶನದ ಅನುಭವವಿದ್ದೂ ಸುದೀಪ್‌ರಂತಹ ಪ್ರಬುದ್ಧ, ಪ್ರತಿಭಾವಂತ ನಟರೂ ಕೂಡಾ ರಿಮೇಕ್ ಕಡೆಗೇ ಹೆಚ್ಚು ಒಲವು ತೋರಿಸುತ್ತಿರುವುದು ಮಾತ್ರ ವಿಷಾದ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸಿಂಗಂ, ಸುದೀಪ್, ಕೆಂಪೇಗೌಡ, ವಿಷ್ಣುವರ್ಧನ