ಎರಡನೇ ಮದುವೆಯೆಂಬ ಅಪ್ಪಟ ಹಾಸ್ಯ ಚಿತ್ರ ಸುದ್ದಿ ಮಾಡಿದ್ದು ಗೊತ್ತೇ ಇದೆ. ಈ ರೀಲ್ ಎರಡನೇ ಮದುವೆಯ ಜೊತೆಗೆ ರಿಯಲ್ ಎರಡನೇ ಮದುವೆಯೊಂದು ನಡೆದುಹೋಗಿದೆ. ಅದು ಸ್ವತಃ ಎರಡನೇ ಮದುವೆ ಚಿತ್ರದ ನಿರ್ದೇಶಕ ದಿನೇಶ್ ಬಾಬು ಅವರದ್ದು ಅನ್ನೋದು ಇನ್ನೊಂದು ಕಾಕತಾಳೀಯ ಸೋಜಿಗ. ಆದರೆ, ಈ ಎಱಡನೇ ಮದುವೆ ನಡೆದು ಈಗಾಗಲೇ ನಾಲ್ಕು ತಿಂಗಳುಗಳೂ ಕಳೆದಿವೆ.
ಹೌದು. ನಿರ್ದೇಶಕ ದಿನೇಶ್ ಬಾಬು ಎರಡನೇ ಮದುವೆಯಾಗಿದ್ದಾರೆ. ಈ ಹಿಂದೆಯೇ ತಮ್ಮ ಮೊದಲ ಪತ್ನಿಯಿಂದ ವಿಚ್ಛೇದನ ಪಡೆದಿದ್ದು, ಇದೀಗ ನಾಲ್ಕು ತಿಂಗಳ ಹಿಂದೆ ಮತ್ತೆ ವೈವಾಹಿಕ ಜೀವನಕ್ಕೆ ಅಡಿಯಿಟ್ಟಿದ್ದಾರೆ. ಇನ್ನೂ ಸೋಜಿಗದ ವಿಚಾರವೆಂದರೆ, 52ರ ಹರೆಯದ ದಿನೇಶ್ ಬಾಬು ಎರಡೇ ಬಾರಿಗೆ ಮದುವೆಯಾಗಿದ್ದು ತಮ್ಮ ಮಗಳಷ್ಟು ವಯಸ್ಸಿನ ಅಂದರೆ 25ರ ಆಸುಪಾಸಿನಲ್ಲಿರುವ ಚೇತನಾರನ್ನು! ಈ ಚೇತನಾ ಇನ್ಯಾರೂ ಅಲ್ಲ. ಎರಡನೇ ಮದುವೆ ಚಿತ್ರದಲ್ಲಿ ದಿನೇಶ್ ಬಾಬು ಅವರಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದವರು.
ಕಿರುತೆರೆ ನಟಿ ಆಶಾಲತಾ ಎಂಬವರ ಪುತ್ರಿಯಾಗಿರುವ ಚೇತನಾ ಹಾಗೂ ದಿನೇಶ್ ಬಾಬು ಅವರು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರಂತೆ. ದಿನೇಶ್ ಬಾಬು ಅವರೇ ಹೇಳುವಂತೆ, ಇದು ಹಿರಿಯರ ಒಪ್ಪಿಗೆಯ ಮೇರೆಗೇ ನಿಶ್ಚಯವಾದ ಮದುವೆಯಂತೆ.
ನನ್ನ ಹಾಗೂ ಚೇನತಾ ಮದುವೆ ವಿಚಾರ ಸಂಪೂರ್ಣ ಖಾಸಗಿ ವಿಚಾರ. ಹಾಗಾಗಿ ನಾನಿದನ್ನು ಸಾರ್ವಜನಿಕಗೊಳಿಸಲಿಲ್ಲ. ನಮ್ಮ ತುಂಬ ಆಪ್ತ ವಲಯದವರು ಮಾತ್ರ ಈ ಮದುವೆಗೆ ಆಗಮಿಸಿದ್ದರು. ಇದು ಹೇಗೆ ಮಾಧ್ಯಮಗಳಿಗೆ ತಿಳಿಯಿತೋ ಗೊತ್ತಿಲ್ಲ. ಪತ್ರಕರ್ತರೆಲ್ಲರೂ ಈ ಬಗ್ಗೆ ಕೇಳುತ್ತಿರುವುದರಿಂದ ಹೇಳುತ್ತಿದ್ದೇನೆ. ನಾನು ಹಾಗೂ ಚೇತನಾ ತುಂಬ ಅನ್ಯೋನ್ಯವಾಗಿದ್ದೇವೆ. ನಮ್ಮಿಬ್ಬರ ಅಭಿರುಚಿಗಳೂ ಒಂದೇ ಇವೆ. ಆಕೆ ನನ್ನನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾಳೆ. ಒಟ್ಟಾರೆ ನನ್ನ ದಾಂಪತ್ಯ ಜೀವನ ತುಂಬ ಸುಖಮಯವಾಗಿದೆ ಎನ್ನುತ್ತಾರೆ ದಿನೇಶ್ ಬಾಬು.
ಎರಡನೇ ಮದುವೆ ಚಿತ್ರೀಕರಣ ಸಂದರ್ಭವೇ ಇವರಿಬ್ಬರ ನಡುವೆ ಪ್ರೀತಿ ಅಂಕುರಿಸಿದ್ದು ವಿಶೇಷ. ಇದಕ್ಕೂ ಮೊದಲು ದಿನೇಶ್ ಬಾಬು ಅವರ ಜನುಮದ ಗೆಳತಿ, ಮಿ.ಪೈಂಟರ್ ಚಿತ್ರಗಳಲ್ಲಿ ಚೇತನಾ ದಿನೇಶ್‌ಗೆ ಸಹಾಯಕರಾಗಿ ಕೆಲಸ ಮಾಡಿದ್ದರು. ಸದ್ಯ ಈ ಇಬ್ಬರೂ ಮತ್ತೊಂದು ಮದುವೆನಾ? (ಎರಡನೇ ಮದುವೆ-2) ಎಂಬ ಇನ್ನೊಂದು ಚಿತ್ರ ನಿರ್ದೇಶಿಸಲಿದ್ದಾರೆ. ನೂತನ ದಂಪತಿಗಳಿಗೆ ಶುಭ ಕೋರೋಣ.