ಹಿಂದೆ ಮೀರಾ ಕೃಷ್ಣನ ಬರುವಿಕೆಗಾಗಿ ವರ್ಷಗಳ ಕಾಲ ಕಾದಿದ್ದ ಕಥೆ ಎಲ್ಲರಿಗೂ ತಿಳಿದಿದೆ. ಇದೇ ರೀತಿ ಪ್ರೇಮಿಗಾಗಿ ಕಾಯುವ ಮೀರಾಳ ಕಥೆಯೊಂದು ಚಿತ್ರವಾಗುತ್ತಿದೆ. ಅದೇ ಮುರಳಿ ಮೀಟ್ಸ್ ಮೀರಾ.
ಇದೊಂದು ನಿಜ ಜೀವನದ ಕಥೆಯಂತೆ. ಸಿಂಪಲ್ ಸಂಭಾಷಣೆಯಿಂದ ಚಿತ್ರ ಶ್ರೀಮಂತವಾಗಿದೆ ಎಂಬುದು ಚಿತ್ರತಂಡದ ಅಂಬೋಣ. ಪ್ರಜ್ವಲ್ ದೇವರಾಜ್ ಹಾಗೂ ಮೀರಾ ವರ್ಮಾ ಈ ಚಿತ್ರದಲ್ಲಿ ಮುರುಳಿ ಹಾಗೂ ಮೀರಾ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಧಿಮಾಕು ಚಿತ್ರವನ್ನು ನಿರ್ದೇಶಿಸಿದ್ದ ಮಹೇಶ್ ರಾವ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಚಿತ್ರದ ಕಥೆಯನ್ನು ಇವರು ಎರಡು ವರ್ಷ ಹಿಂದೆಯೇ ಸಿದ್ಧಪಡಿಸಿದ್ದರಂತೆ. ಆದರೆ ಕೆಲ ಕಾರಣದಿಂದ ಚಿತ್ರದ ಸಿದ್ಧತೆ ಮುಂದೆ ಹೋಗಿತ್ತು. ಮೀರಾ ಮುರುಳಿಯ ಬರವಿಗಾಗಿ ಕಾಯುವುದೇ ಚಿತ್ರದ ಜೀವಾಳ. ಇದನ್ನು ಉತ್ತಮವಾಗಿ ಸಿದ್ಧಪಡಿಸಿ ಜನರ ಮುಂದೆ ತರುತ್ತಿದ್ದೇವೆ ಎನ್ನುತ್ತಾರೆ ನಿರ್ದೇಶಕರು.
ಅಂದಿನ ಮುರಳಿ (ಶ್ರೀ ಕೃಷ್ಣ ಪರಮಾತ್ಮ) ಸ್ತ್ರೀಲೋಲನಾಗಿದ್ದ. ಆದರೆ ಈ ಮುರಳಿ ಕ್ಯಾರೆಕ್ಟರ್ ತೀರಾ ಭಿನ್ನ. ಈತ ಕೇವಲ ಮೀರಾಗಾಗಿ ಮುಡಿಪಾಗಿರುವವರು. ಮೀರಾಳ ಪ್ರೀತಿಗೆ ಮರುಳಾಗಿ ಅವಳ ಜೀವನದಲ್ಲೇ ಕರಗಿ ಹೋಗುತ್ತಾನೆ. ಈ ಒಂದು ಭಿನ್ನ ಪಾತ್ರ ಸಿಕ್ಕಿದ್ದು ನನ್ನ ಅದೃಷ್ಟ. ಸಾಕಷ್ಟು ಚಿತ್ರ ಮಾಡಿದ್ದೇನೆ. ಲವರ್ ಬಾಯ್ ಆಗಿಯೂ ಕಾಣಿಸಿಕೊಂಡಿದ್ದೇನೆ. ಆದರೆ ಇದು ವಿಭಿನ್ನ ಗೆಟಪ್ ನೀಡುತ್ತದೆ ಎನ್ನುತ್ತಾರೆ ಪ್ರಜ್ವಲ್.
ಇನ್ನು ನಟಿ ಮೀರಾ ಪಾತ್ರದಲ್ಲಿರುವ ರೀಮಾರದ್ದು, ವಿಪರೀತ ವಾಚಾಳಿಯ ಪಾತ್ರ. ಬೇಸರಗೊಂಡವರನ್ನು ತಕ್ಷಣ ನಗಿಸುವ ಮಾದರಿಯ ಪಾತ್ರ ಇವರದ್ದಂತೆ. ಸಂಗೀತಕ್ಕೆ ಹೆಚ್ಚು ಪ್ರಾಧಾನ್ಯ ನೀಡಲಾಗಿದೆ. ಒಟ್ಟಾರೆ ಇದೊಂದು ರೊಮ್ಯಾಂಟಿಕ್ ಹಾಗೂ ಸಂಗೀತ ಪ್ರಧಾನ ಚಿತ್ರ. ಅಭಿಮಾನ್ ರೈ ಸಂಗೀತ ನೀಡಿದ್ದಾರೆ.