ಆ ದಿನಗಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಕನ್ನಡದ ಸುಂದರಾಂಗ ಚೇತನ್ ಇದೀಗ ತೆಲುಗು ಚಿತ್ರರಂಗಕ್ಕೂ ಲಗ್ಗೆಯಿಟ್ಟಿದ್ದಾರೆ. ಶಶಿಕಿರಣ್ ಎಂಬ ನಿರ್ದೇಶಕರ ತೆಲುಗು ಚಿತ್ರವೊಂದಕ್ಕೆ ಚೇತನ್ ಸಹಿ ಮಾಡಿದ್ದಾರೆ. ಚಿತ್ರ ಏಕಕಾಲಕ್ಕೆ ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ತೆರೆಗೆ ಬರಲಿದೆ. ಆ ದಿನಗಳು ಚಿತ್ರದ ನಂತರ ಬಿರುಗಾಳಿ, ಸೂರ್ಯಕಾಂತಿ ಚಿತ್ರಗಳೆರಡರಲ್ಲೂ ಸೋಲನ್ನೇ ಕಂಡ ಚೇತನ್ ತನ್ನ ಕನ್ನಡದ ಸೋಲಿನಿಂದ ಕಂಗೆಟ್ಟು ತೆಲುಗಿನತ್ತ ಕಣ್ಣು ನೆಟ್ಟಿರಬಹುದು ಎಂಬ ಸಂಶಯ ಯಾರಿಗೂ ಬರಬಹುದು. ಆದರೆ ಚೇತನ್ ಮಾತ್ರ ಅಲ್ಲಗಳೆಯುತ್ತಾರೆ.
ನಾನು ಸೋಲನ್ನೇ ಕಂಡಿದ್ದೇನೆ ಎಂಬ ಮಾತನ್ನು ನಾನು ಒಪ್ಪಿಕೊಳ್ಳುವುದಿಲ್ಲ ಎನ್ನುವ ಚೇತನ್, ತೆಲುಗಿಗೆ ಕಾಲಿಟ್ಟಿದ್ದೇನೆ ಎಂಬುದಕ್ಕೂ ಕನ್ನಡ ಚಿತ್ರರಂಗದ ನನ್ನ ಕೆರಿಯರ್‌ಗೂ ಸಂಬಂಧವಿಲ್ಲ. ಒಬ್ಬ ಕಲಾವಿದನಾಗಿ ನಾನು ಉತ್ತಮ ಅವಕಾಶಗಳು ಬಂದರೆ ಒಪ್ಪಿಕೊಳ್ಳಲು ಸಿದ್ಧ. ಅವಕಾಶ ಬಂತು, ನಟಿಸುತ್ತಿದ್ದೇನೆ ಅಷ್ಟೆ. ಜೊತೆಗೆ ಕನ್ನಡವನ್ನೂ ಮರೆತಿಲ್ಲ. ಮರೆಯಲಾರೆ ಎಂಬ ಚಿತ್ರದಲ್ಲಿ ಸದ್ಯ ಬ್ಯುಸಿಯಾಗಿದ್ದೇನೆ. ಈ ಚಿತ್ರಕ್ಕೆ ನಾನೇ ಸಂಭಾಷಣೆಯನ್ನೂ ಬರೆಯುತ್ತಿದ್ದೇನೆ ಎನ್ನುತ್ತಾರೆ ಚೇತನ್.
ಇದಲ್ಲದೆ ಇನ್ನೂ ಒಂದು ಹೆಸರಿಡದ ಚಿತ್ರಕ್ಕಾಗಿ ಚೇತನ್ ಈಗಾಗಲೇ ಸಿದ್ಧತೆ ಆರಂಭಿಸಿದ್ದಾರೆ. ಆ ದಿನಗಳು ಚಿತ್ರ ಕಮರ್ಷಿಯಲ್ ಚಿತ್ರವಲ್ಲದಿದ್ದರೂ, ಭರ್ಜರಿಯಾಗಿ ಹಿಟ್ ಆಗಿತ್ತು. ಆದರೆ ಚೇತನ್ ನಟಿಸಿದ ಕಮರ್ಷಿಯಲ್ ಚಿತ್ರಗಳೆಲ್ಲವೂ ತೋಪೆದ್ದಿವೆ. ಹಾಗಾದರೆ ಚೇತನ್ ಅವರ ಕಮರ್ಷಿಯಲ್ ನಡೆ ಜನತೆಗೆ ಇಷ್ಟವಿಲ್ಲವೇನೋ ಎಂದರೆ, ಚೇತನ್ ಆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲ್ಲ. ನಿರ್ದೇಶಕರ ಕಾನ್ಸೆಪ್ಟ್ ಇಷ್ಟವಾಯಿತು. ಕಲಾವಿದನಾಗಿ ವಿವಿಧ ಬಗೆಯ ಪಾತ್ರಗಳನ್ನು ಮಾಡಿದ್ದೇನೆ. ಗೆದ್ದರೆ ಹೀಗೆ ಯಾರೂ ಹೇಳೋದಿಲ್ಲ. ಸೋತರೆ ಮಾತ್ರ ತಪ್ಪು ಒಪ್ಪುಗಳ ವಿಮರ್ಶೆ ನಡೆಯುತ್ತದೆ. ಆದರೆ ನಾನೊಬ್ಬ ಪಾಸಿಟಿವ್ ವ್ಯಕ್ತಿತ್ವದಾತ. ಈವರೆಗೆ ಮಾಡಿದ ಚಿತ್ರಗಳ ಬಗ್ಗೆ ನನಗೆ ಯಾವ ಪಶ್ಚಾತ್ತಾಪವೂ ಇಲ್ಲ ಎಂದರು.
ಒಟ್ಟಾರೆ ವಿದೇಶದಲ್ಲೇ ಹುಟ್ಟು ಬೆಳೆದ ಈ ಕನ್ನಡಿಗ ಚೇತನ್ ಮರಳಿ ಕನ್ನಡ ನೆಲಕ್ಕೆ ಬಂದು ಅರಳು ಹುರಿದಂತೆ ಕನ್ನಡ ಮಾತನಾಡುತ್ತಾ ಕನ್ನಡ ಚಿತ್ರಗಳಲ್ಲಿ ನಟನೆಯ ಬಗ್ಗೆ ಗಂಭೀರ ಪ್ರಯತ್ನ ಮಾಡುತ್ತಿರುವುದು ಇಲ್ಲೇ ಹುಟ್ಟಿ ಬೆಳೆದು ಕನ್ನಡ ಮಾತನಾಡಲು ತಿಣುಕಾಡುವ ಎಷ್ಟೇ ನಟಿಯರಿಗೆ ಪಾಠವಾಗುತ್ತಾರೆಂಬುದು ಮಾತ್ರ ಸುಳ್ಳಲ್ಲ. ಏನೇ ಇರಲಿ. ಚೇತನ್ ಎಂಬ ಈ ಕನ್ನಡದ ಚೆಲುವಾಂತ ಚೆನ್ನಿಗ ಬೆಳೆಯಲಿ. ಶುಭವಾಗಲಿ.