ರಜನೀಕಾಂತ್, ಐಶ್ವರ್ಯಾ ರೈ ತಾರಾಗಣದ ಎಂದಿರನ್- ದಿ ರೋಬೋಟ್ ಚಿತ್ರ ಇದೀಗ ಸಾಕಷ್ಟು ಸುದ್ದಿ ಮಾಡುತ್ತಿದೆ. ಕೇವಲ ತಮಿಳಿನಲ್ಲಿ ಮಾತ್ರವಲ್ಲದೆ, ರಾಷ್ಟ್ರಾದ್ಯಂತ ಸುದ್ದಿ ಮಾಡುತ್ತಿರುವ ಈ ಚಿತ್ರ ಕರ್ನಾಟಕದಲ್ಲಿ ಹಾಗೂ ಆಂಧ್ರದಲ್ಲಿ ಈಗಾಗಲೇ ಭಾರೀ ಹಣಕ್ಕೆ ಬಿಕರಿಯಾಗಿದೆ. ನಮ್ಮ ಕನ್ನಡ ನೆಲದಲ್ಲಿ ಈ ತಮಿಳು ಚಿತ್ರ 9.75 ಕೋಟಿ ರೂಪಾಯಿಗಳಿಗೆ ಬಿಕರಿಯಾಗಿದೆ. ಆಂಧ್ರದಲ್ಲಿ ಇದಕ್ಕೆ ದಕ್ಕಿದ ಬೆಲೆ 33 ಕೋಟಿ ರೂಪಾಯಿಗಳು!
ಭಾರತ ಚಿತ್ರರಂಗವೇ ಈವರೆಗೆ ಕಂಡು ಕೇಳರಿಯದ ಬೃಹತ್ ಮೊತ್ತ 190 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿತವಾಗಿರುವ ಈ ಎಂದಿರನ್ ಚಿತ್ರದ ಕಥೆ ಬಹುತೇಕ ಕನ್ನಡದ ಉಪೇಂದ್ರ ನಟನೆಯ ಹಾಲಿವುಡ್ ಚಿತ್ರದ ಕಥೆಯಂತೆಯೇ ಇದೆ ಎಂಬ ಮಾತುಗಳು ಇತ್ತೀಚೆಗೆ ಕೇಳಿ ಬರುತ್ತಿದೆ. ಹಾಲಿವುಡ್ ಚಿತ್ರದ ಕಥೆಯಿಂದ ಪ್ರೇರಿತವಾಗಿಯೇ ಈ ಚಿತ್ರ ನಿರ್ಮಿಸಿದ್ದಾ ಎಂಬ ಬಗ್ಗೆಯೂ ಗುಮಾನಿ ಮೂಡುತ್ತದೆ. ಅದೇನೇ ಇರಲಿ, ಒಟ್ಟಾರೆ ಭಾರೀ ಮೊತ್ತದ ಈ ಚಿತ್ರ ಈಗ ಎಲ್ಲೆಡೆ ಹವಾ ಸೃಷ್ಟಿಸುತ್ತಿದೆ.
ಚಿತ್ರ ಸೆಪ್ಟೆಂಬರ್ ತಿಂಗಳಲ್ಲಿ ತೆರೆಗಪ್ಪಳಿಸಲಿದ್ದು, ಹಿಂದಿ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಅಂತಾರಾಷ್ಟ್ರೀಯ ವಲಯದಲ್ಲೂ ಸಾಕಷ್ಟು ಕುತೂಹಲ ಸೃಷ್ಟಿ ಮಾಡಿರುವ ಈ ಚಿತ್ರ ಬಾಲಿವುಡ್ ವಲಯದಲ್ಲೂ ಇದು ಸಾಕಷ್ಟು ಸುದ್ದಿ ಮಾಡಿದೆ. ಸೊಸೆ ಐಶ್ವರ್ಯಾ ಜೊತೆಗೆ ಅಮಿತಾಬ್ ಬಚ್ಚನ್ ಅವರೇ ಸ್ವತಃ ವಿದೇಶಗಳಲ್ಲೂ ಪ್ರಚಾರ ಕೈಗೊಂಡಿದ್ದಾರೆ.
ಕನ್ನಡ ನೆಲದಲ್ಲೂ ರಜನಿ ಅಭಿಮಾನಿಗಳಲ್ಲಿ ಕುತೂಹಲ ಸೃಷ್ಟಿಸಿರುವ ಎಂದಿರನ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಜೊತೆಗೆ ಬಿಡುಗಡೆಯ ಸಂದರ್ಭ ಗುದ್ದಾಟ ನಡೆಸುವ ಸಂಭವವೂ ಇದೆ. ಈವರೆಗೆ ರಜನಿ ಚಿತ್ರಗಳು ಕನ್ನಡ ನೆಲದಲ್ಲಿ ವಾಣಿಜ್ಯ ಮಂಡಳಿಯ ನಿಬಂಧನೆಗಳನ್ನು ಧಿಕ್ಕರಿಸಿ 24ಕ್ಕೂ ಹೆಚ್ಚು ಚಿತ್ರ ಮಂದಿರಗಳ್ಲಲಿ ಬಿಡುಗಡೆಯಾಗಿದ್ದರಿಂದ ಈ ಬಾರಿಯೂ ಆ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.