ಡ್ರಗ್ ಮಾಫಿಯಾ: ನಟ ರವಿತೇಜ ಸಹೋದರರ ಬಂಧನ, ತ್ರಿಷಾಗೂ ಲಿಂಕ್?
ಸೋಮವಾರ, 23 ಆಗಸ್ಟ್ 2010( 11:47 IST )
WD
ಚಿತ್ರರಂಗದ ಮತ್ತೊಂದು ಮುಖ ಬಯಲಾಗಿದೆ. ಚಿತ್ರರಂಗದಲ್ಲಿ ಮಾದಕ ವ್ಯಸನಗಳೇನೂ ಹೊಸತಲ್ಲ. ಆದರೆ ಇದೀಗ ಬೆಚ್ಚಿ ಬೀಳಿಸುವ ಪ್ರಕರಣವೊಂದು ನಡೆದಿದೆ. ತೆಲುಗಿನ ಕ್ರೇಜ್ ಸ್ಟಾರ್ ಎಂದೇ ಖ್ಯಾತರಾದ ರವಿತೇಜ ಅವರ ಸಹೋದರರಾದ ಭರತ್ ಹಾಗೂ ರಘು ಬಾಬು ಇದೀಗ ರೆಡ್‌ಹ್ಯಾಂಡ್ ಆಗಿ ಡ್ರಗ್ ಹಗರಣದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಹೈದರಾಬಾದ‌್‌ನ ಬಂಜಾರಾ ಹಿಲ್ಸ್‌ನಲ್ಲಿ ಪೊಲೀಸರು ರವಿತೇಜ ಸಹೋದರರನ್ನು ಬಂಧಿಸಿದ್ದಾರೆ. ಜೊತೆಗೆ ತೆಲುಗು ಚಿತ್ರರಂಗದ ನಟನಟಿಯರಿಗೂ ಈ ಡ್ರಗ್ ಮಾಫಿಯಾಕ್ಕೂ ಸಂಬಂಧವಿರುವುದೂ ಬಯಲಾಗಿದ್ದು, ಇದರಲ್ಲಿ ಮುಂಚೂಣಿಯಲ್ಲಿರುವ ನಟಿ ತ್ರಿಷಾ ಅವರ ಹೆಸರೂ ಕೂಡಾ ವ್ಯಾಪಕವಾಗಿ ಕೇಳಿ ಬರುತ್ತಿದೆ.
ಬಂಜಾರಾ ಹಿಲ್ಸ್ ಸಮೀಪ ಎಪಿ13ಎಲ್ 8999 ಕಾರಿನಲ್ಲಿದ್ದ ಆಫ್ರಿಕನ್ ಮೂಲದ ಯುವಕ ಹಾಗೂ ಆತನ ಜೊತೆಯಲ್ಲಿದ್ದ ರವಿತೇಜ ಅವರ ಸಹೋದರರಾದ ಭರತ್ ಹಾಗೂ ರಘು ಬಾಬು ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆಫ್ರಿಕನ್ ಯುವಕನ ಬಳಿಯಲ್ಲಿ 51 ಗ್ರಾಂ ಕೊಕೇನ್ ಡ್ರಗ್ ಕಾರಿನಲ್ಲಿ ಪತ್ತೆಯಾಗಿದ್ದು, ರವಿತೇಜ ಸಹೋದರರ ಕೈಯಲ್ಲಿ 3 ಗ್ರಾಂ ತೂಕದ ಕೊಕೇನ್ ಇದ್ದುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಕಾರು, ಒಂದು ಲ್ಯಾಪ್ ಟಾಪ್ ಹಾಗೂ ಕೊಕೇನನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದಕ್ಕೂ ಮೊದಲೇ ರವಿತೇಜ ಅವರ ಸಹೋದರರಿಗೂ ಡ್ರಗ್ ಮಾಫಿಯಾಗೂ ಸಂಬಂಧವಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ದೊರೆತಿತ್ತು. ಆದರೆ ಯಾವುದೇ ಆಧಾರವಿಲ್ಲದಿದ್ದರುದರಿಂದ ಬಂಧಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಪೊಲೀಸರು ಇದೀಗ ಬಲೆ ಬೀಸಿ ರೆಡ್ ಹ್ಯಾಂಡ್ ಆಗಿ ಅವರನ್ನು ಹಿಡಿದಿದ್ದಾರೆ. ಉಗಾಂಡಾದಿಂದ ಡ್ರಗ್ ಅಕ್ರಮವಾಗಿ ತರಿಸಿಕೊಳ್ಳಲಾಗುತ್ತಿದ್ದು, ರವಿ ತೇಜ ಅವರ ಸಹೋದರ ರಘು ಬಾಬು ಅವರೇ ಸಿನಿಮಾ ಲೋಕದ ಬಹಳಷ್ಟು ಮಂದಿಗೆ ಡ್ರಗ್ ಹಂಚಿಕೆ ಮಾಡುತ್ತಿದ್ದರು ಎಂಬ ಮಾಹಿತಿ ಬಹಿರಂಗವಾಗಿದೆ. ಈಗಾಗಲೇ ಲ್ಯಾಪ್ಟಾಪ್‌ನಲ್ಲಿ ಸಿನಿಮಾ ರಂಗದ ಸಾಕಷ್ಟು ಮಂದಿಯ ಹೆಸರು ಇದ್ದುದನ್ನು ಪೊಲೀಸರು ಪತ್ತೆ ಹಚ್ಚಿದ್ದು ಇದರಲ್ಲಿ ಈಗಾಗಲೇ ಕುಡಿತಕ್ಕೆ ಹೆಸರಾಗಿರುವ ತ್ರಿಷಾ, ಸಾಯಿರಾ ಬಾನು, ರಾಜಕಾರಣಿಗಳ ಮಕ್ಕಳ ಹೆಸರುಗಳೂ ಕೇಳಿ ಬಂದಿದೆ.
WD
ನಾನು ಡ್ರಗ್ ಅಡಿಕ್ಟ್ ಅಲ್ಲ- ತ್ರಿಷಾ: ರವಿತೇಜ ಸದ್ಯ ದೆಹಲಿಯಲ್ಲಿ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದು, ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ತನಗೂ ಡ್ರಗ್ ಮಾಫಿಯಾಕ್ಕೂ ಸಂಬಂಧವಿರುವುದನ್ನು ತ್ರಿಷಾ ತಳ್ಳಿ ಹಾಕಿದ್ದಾರೆ. ಈ ಸುದ್ದಿ ಕೇಳಿ ನನಗೆ ಶಾಕ್ ಆಗಿದೆ. ನಾನೀಗ ಕೊಡೈಕನಲ್‌ನಲ್ಲಿ ಶೂಟಿಂಗ್‌ನಲ್ಲಿರುವುದರಿಂದ ನನಗೆ ಈ ಸುದ್ದಿ ತಡವಾಗಿ ತಿಳಿಯಿತು. ನನ್ನ ಕೆಲವು ತೆಲುಗು ಮಿತ್ರರು ನನಗೆ ಈ ಸುದ್ದಿ ತಿಳಿಸಿದರು. ಖಂಡಿತ ನಾನು ಡ್ರಗ್ ಅಡಿಕ್ಟ್ ಅಲ್ಲ. ಅದು ಹೇಗೆ ನನ್ನ ಹೆಸರು ಇಲ್ಲಿಗೆ ಲಿಂಕ್ ಆಗಿದೆಯೋ ಗೊತ್ತಿಲ್ಲ. ಯಾರೋ ನನ್ನ ಇಮೇಜಿಗೆ ಧಕ್ಕೆಯುಂಟು ಮಾಡಲು ಬೇಕೆಂದೇ ನನ್ನ ಹೆಸರನ್ನು ಎಳೆದು ತಂದಿದ್ದಾರೆ. ಆದರೆ ನಾನು ಹೇಡಿಯಲ್ಲ. ನಾನೀಗಾಗಲೇ ಈ ಬಗ್ಗೆ ನನ್ನ ಲಾಯರನ್ನು ಸಂಪರ್ಕಿಸಿದ್ದು ಇದರ ವಿರುದ್ಧ ಹೋರಾಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಎಂಪಿ ಹರ್ಷ ಕುಮಾರ್ ಅವರ ಮಗ, ಎಂಪಿ ಲಗಪತಿ ರಾಜಗೋಪಾಲ್ ಅವರ ಮಗನ ಹೆಸರೂ ಕೂಡಾ ಲ್ಯಾಪ್‌ಟಾಪ್‌ನಲ್ಲಿತ್ತು ಎಂದು ಹೇಳಲಾಗಿದೆ. ಆದರೆ, ಹರ್ಷ ಕುಮಾರ್ ಮಾತನಾಡುತ್ತಾ, ನನ್ನ ಮಗ ನಿಜಕ್ಕೂ ಈ ಪ್ರಕರಣದಲ್ಲಿ ಭಾಗಿಯಾಗಿದ್ದರೆ ಖಂಡಿತವಾಗಿಯೂ ಅವನಿಗೆ ಶಿಕ್ಷೆಯಾಗಬೇಕು. ಆದರೆ ಆತ ಮುಗ್ಧ. ಇಂಥ ಪ್ರಕರಣದಲ್ಲಿ ಭಾಗಿಯಾಗಿಲ್ಲ. ಮೊಬೈಲ್ ನಂಬರ್ ಇದ್ದ ಮಾತ್ರಕ್ಕೆ ಭಾಗಿ ಎಂಬ ಅರ್ಥವಲ್ಲ. ಬೇಕಿದ್ದರೆ ಆತನ ಮೇಲೆ ಪರೀಕ್ಷೆ ನಡೆಸಬಹುದು ಎಂದು ಸವಾಲು ಹಾಕಿದ್ದಾರೆ.
ತೆಲುಗಿನ ಪ್ರಮುಖ ಪತ್ರಿಕೆಯೊಂದು, ಇನ್ನೂ ಹಲವರ ಹೆಸರನ್ನು ಬಹಿರಂಗಗೊಳಿಸಿದ್ದು, ಈಗಿನ ಹೊಸ ಭರವಸೆಯ ನಟರಾದ ರಾಜಾ, ನಾನಿ, ಉದಯ ಕಿರಣ್ ಅವರುಗಳೂ ಕೂಡಾ ಲಿಂಕ್ ಹೊಂದಿದ್ದಾರೆ ಎಂದು ವರದಿ ಮಾಡಿತ್ತು. ಆದರೆ ನಾನಿ, ನಾನು ನನ್ನ ಜೀವಮಾನದಲ್ಲಿ ಡ್ರಗ್ಸ್ ನೋಡಿಲ್ಲ ಎಂದಿದ್ದಾರೆ. ಇದಲ್ಲದೆ ಚಿತ್ರರಂಗದ ಇನ್ನೂ 60 ಮಂದಿ ಈ ಜಾಲದಲ್ಲಿದ್ದಾರೆ ಎಂದು ಪತ್ರಿಕೆ ತಿಳಿಸಿದೆ.