ಮೈಲಾರಿ ಚಿತ್ರದ ಶೀರ್ಷಿಕೆಗೆ ಎದುರಾಗಿದ್ದ ಬೆಟ್ಟದಂಥ ಆತಂಕವೊಂದು ಮಂಜಿನಂತೆ ಕರಗಿ ಹೋಗಿದೆ. ಮೈಲಾರಿ ಚಿತ್ರದ ಶೀರ್ಷಿಕೆ ವಿವಾದಕ್ಕೀಗ ಪೂರ್ಣವಿರಾಮ ಬಿದ್ದಿದೆ. ಸಂಧಾನ ಸೂತ್ರದ ಅಡಿ ಚಿತ್ರದ ಹೆಸರು ಹಾಗೆಯೇ ಉಳಿದುಕೊಳ್ಳಲಿದೆ.
ಹೌದು, ತಾಜ್‌ಮಹಲ್ ಚಿತ್ರದ ಮೂಲಕ ಜನಪ್ರಿಯರಾದ ನಿರ್ದೇಶಕ ಆರ್. ಚಂದ್ರು ಕಥೆ, ಚಿತ್ರಕಥೆ, ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ ಮೈಲಾರಿ. ಇದು ಶಿವರಾಜ್ ಕುಮಾರ್ ಅವರ 99ನೇ ಚಿತ್ರವೂ ಹೌದು. ಆರ್.ಎನ್. ಪ್ರೊಡಕ್ಷನ್ಸ್ ಅಡಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಆರ್. ಚಂದ್ರು ಅರಿಯದೇ ಈ ಶೀರ್ಷಿಕೆ ಇಟ್ಟು ಬಿಟ್ಟಿದ್ದರು.
ಆದರೆ ಅಶ್ವಿನಿ ರಾಮ್ ಪ್ರಸಾದ್ ಈ ಶೀರ್ಷಿಕೆಯ ಹಕ್ಕನ್ನು ಮೊದಲೇ ಪಡೆದುಕೊಂಡಿದ್ದರು. ಇದು ಚಂದ್ರುಗೆ ಗೊತ್ತಿರಲಿಲ್ಲ. ವಿಷಯ ತಿಳಿದ ಅಶ್ವಿನಿ ರಾಮ್ ಪ್ರಸಾದ್ ನೇರವಾಗಿ ನ್ಯಾಯಕ್ಕೆ ಮೊರೆ ಹೋಗಿ ಕೆಎಫ್‌ಸಿಸಿಗೆ ದೂರು ನೀಡಿದರು. ಮೈಲಾರಿ ಹೆಸರಿನಲ್ಲಿ ಚಿತ್ರದ ಜಾಹೀರಾತು ಕೂಡ ನೀಡಬಾರದು ಎಂದು ಮನವಿ ಮಾಡಿಕೊಂಡಿದ್ದರು.
ಇದು ಚಂದ್ರು ಅವರಿಗೆ ಪೀಕಲಾಟಕ್ಕೆ ಈಡು ಮಾಡಿತು. ಈ ನಡುವೆ ಅಶ್ವಿನಿ ರಾಮ್ ಪ್ರಸಾದ್‌ರನ್ನು ಸಂಪರ್ಕಿಸಲು ನಡೆಸಿದ ಎಲ್ಲಾ ಪ್ರಯತ್ನ ವಿಫಲವಾದವು. ರಾಜಿ ಯತ್ನವೂ ಫಲ ಕೊಡಲಿಲ್ಲ. ಇದು ನನಗೆ ಬೇಕೇ ಬೇಕು ಎಂದು ಅಶ್ವಿನಿ ಪ್ರಸಾದ್ ಪಟ್ಟು ಹಿಡಿದು ಕುಳಿತಿದ್ದರು. ಆದರೆ ಈಗ ಅಶ್ವಿನಿ ರಾಮ್ ಪ್ರಸಾದ್ ತಮ್ಮ ಬಿಗಿಪಟ್ಟಮನ್ನು ಸಡಿಲಿಸಿದ್ದಾರೆ. ಮೈಲಾರಿ ಹೆಸರನ್ನು ಬಿಟ್ಟುಕೊಟ್ಟಿದ್ದಾರೆ.
ಇದಕ್ಕಿಂತ ಒಳ್ಳೆ ಶೀರ್ಷಿಕೆ ನನಗೆ ನನ್ನ ಚಿತ್ರಕ್ಕೆ ಸಿಗುತ್ತದೆ ಎಂಬ ನಂಬಿಕೆಯಿಂದ ಈ ಟೈಟಲ್ ಬಿಟ್ಟು ಕೊಡುತ್ತಿದ್ದೇನೆ. ಅನಗತ್ಯ ಕಿತ್ತಾಟದಿಂದ ಪ್ರಯೋಜನ ಇಲ್ಲ. ಚಿತ್ರವನ್ನು ಚಂದ್ರು ಮುಂದುವರಿಸಬಹುದು ಎಂದಿದ್ದಾರೆ. ಅಲ್ಲಿಗೆ ಎಲ್ಲವೂ ಶುಭವಾಗಿದೆ.