ಕೊನೆಗೂ ಮಠ ಹಾಗೂ ಎದ್ದೇಳು ಮಂಜುನಾಥ ಚಿತ್ರದ ನಿರ್ದೇಶಕ ಗುರುಪ್ರಸಾದ್ ಮೀಸೆಯ ಅಡಿಯಲ್ಲೇ ನಕ್ಕಿದ್ದಾರೆ. ಅತ್ಯುತ್ತಮ ನಿರ್ದೇಶಕ ಎಂಬ ಫಿಲಂಫೇರ್ ಪ್ರಶಸ್ತಿ ಪಡೆದ ಖುಷಿಯಲ್ಲೇ ಇವರ ಬಹುದಿನಗಳ ಕನಸು ನನಸಾಗಿದೆ. ಕುಂಟುತ್ತಾ ಸಾಗಿದ್ದ ಇವರ ಡೈರೆಕ್ಟರ್ ಸ್ಪೆಷಲ್ ಚಿತ್ರ ಇದೀಗ ಸೆಟ್ಟೇರುವ ಲಕ್ಷಣ ಕಾಣುತ್ತಿದೆ. ಹಾಗಾಗಿ ಗುರು ಈಗ ಸದ್ದಿಲ್ಲದೆ ಬ್ಯುಸಿಯಾಗುವ ಲಕ್ಷಣ ತೋರಿದ್ದಾರೆ.
ಹೌದು. ಪ್ರಶಸ್ತಿಯ ಬೆನ್ನಲ್ಲೇ ಸಾಕಷ್ಟು ಜವಾಬ್ದಾರಿಗಳೂ ಇವರ ಹೆಗಲೇರಿವೆ. ಅವನ್ನು ಸಮರ್ಥವಾಗಿ ನಿಭಾಯಿಸುವ ಜವಾಬ್ದಾರಿಯೂ ಇದೆ. ಗುರು ಪ್ರಸಾದ್ ಯಾವತ್ತೂ ಹೊಗಳಿಕೆಗೆ ಹಿಗ್ಗುವ ಹಾಗೂ ತೆಗಳಿಕೆಗೆ ಕುಗ್ಗುವ ವ್ಯಕ್ತಿ ಅಲ್ಲ. ಇವರ ಮಠ ಹಾಗೂ ಎದ್ದೇಳು ಮಂಜುನಾಥ ಎರಡೂ ಚಿತ್ರಕ್ಕೆ ಜನರಿಂದ ಎಷ್ಟು ಪ್ರಶಂಸೆ ಸಿಕ್ಕಿತೋ ಅಷ್ಟೇ ವಿವಾದವೂ ಎದ್ದಿತ್ತು. ಜಗ್ಗೇಶ್ ಜೊತೆ ಮನಸ್ತಾಪವೂ ಆಯ್ತು. ಅಲ್ಲಿಗೆ ಗುರು ಜಗ್ಗೇಶರ ಕೈಬಿಟ್ಟು ಕೋಮಲ್ ಕೈ ಹಿಡಿದರು. ತಮ್ಮ ಮುಂದಿನ ಚಿತ್ರಕ್ಕೆ ಕೋಮಲ್ ನಾಯಕ ಎಂದು ಘೋಷಿಸಿಯೂ ಇದ್ದರು. ಆದರೆ ಅದೇನಾಯ್ತೋ ಏನೋ, ಕೋಮಲ್ ಕೂಡಾ ಮೆಲ್ಲಗೆ ಗುರು ಹಿಡಿತದಿಂದ ತಪ್ಪಿಸಿಕೊಂಡು ಬಿಟ್ಟರು. ಅಲ್ಲಿಗೆ ಗುರು ತಮ್ಮ ಚಿತ್ರದ ಬಗ್ಗೆ ಮಾತಾಡುವುದನ್ನು ಕಡಿಮೆ ಮಾಡಿ ಬಿಟ್ಟರು. ಹೊಸ ಚಿತ್ರವೂ ಕುಂಟಲು ತೊಡಗಿತು.
ಇದೀಗ ಗುರು ಮತ್ತೆ ಮೈಕೊಡವಿ ಎದ್ದಿದ್ದಾರೆ. ಸದ್ಯ ಇವರ ಮಹತ್ವಾಕಾಂಕ್ಷೆಯ ಚಿತ್ರ ಡೈರೆಕ್ಟರ್ ಸ್ಪೆಷಲ್. ಇದು ಈ ಮಾಸಾಂತ್ಯಕ್ಕೆ ಅಂದರೆ ಆಗಸ್ಟ್ 27ರಂದು ಸೆಟ್ಟೇರಲಿದೆಯಂತೆ. ನಟ ಕೋಮಲ್ ಈ ಚಿತ್ರದ ನಾಯಕ ಎಂದು ಮೊದಲು ಅನಾನ್ಸ್ ಮಾಡಲಾಗಿತ್ತು. ಆದರೆ ಕೋಮಲ್ ಚಿತ್ರದಿಂದ ಹೊರಬಂದ ನಂತರ ಹೊಸ ನಾಯಕನ ಹುಡುಕಾಟ ನಡೆದಿದೆ. ಜೊತೆಗೆ ಗುರುಪ್ರಸಾದ್ ಚಿತ್ರದಲ್ಲಿ ಸಾಕಷ್ಟು ಬದಲಾವಣೆಯನ್ನೂ ಮಾಡಿಕೊಳ್ಳಬೇಕಾಗಿ ಬಂದಿದೆಯಂತೆ. ಅದನ್ನು ಮಾಡಿಕೊಂಡಿದ್ದಾರಂತೆ ಕೂಡ.
ಚಿತ್ರವನ್ನು ಎಂ. ಗೋವಿಂದು ನಿರ್ಮಿಸುತ್ತಿದ್ದಾರೆ. ಅಂದಹಾಗೆ ಗುರುಪ್ರಸಾದ್ ಟಿವಿ ವಾಹಿನಿಯೊಂದಕ್ಕೂ ಚಿತ್ರ ನಿರ್ಮಿಸಿ ಕೊಡುತ್ತಿದ್ದಾರೆ. ಇದು ಬೊಂಬೆಯಾಟವಯ್ಯಾ ಎಂಬ ಹೆಸರಿನ ಎರಡು ಗಂಟೆ ಅವಧಿಯ ಅನಿಮೇಷನ್ ಮಕ್ಕಳ ಚಿತ್ರ. ಇದು ಮಕ್ಕಳ ದಿನಾಚರಣೆಯಂದು ಅಂದರೆ, ನವೆಂಬರ್ 14ರಂದು ಪ್ರಸಾರವೂ ಕಾಣಲಿದೆ.