ಪತ್ರಕರ್ತ ರವಿ ಬೆಳಗೆರೆ ಬರೆದ ಪಾಪಿಗಳ ಲೋಕದಲ್ಲಿ ಕಾದಂಬರಿ ಚಿತ್ರವಾಗಿ ಅದು ಎಷ್ಟು ಜನಪ್ರಿಯವಾಯಿತು ಅನ್ನುವುದು ನಿಮಗೆಲ್ಲಾ ಗೊತ್ತಿದೆ. ಡೆಡ್ಲಿ ಸೋಮ ಹೆಸರಿನ ಈ ಚಿತ್ರ ಕಂಡ ಯಶಸ್ಸಿನಿಂದ ಪುಳಕಿತರಾದ ನಿರ್ದೇಶಕ ರವಿ ಶ್ರೀವತ್ಸ ಎರಡನೇ ಭಾಗವನ್ನೂ ಮಾಡಿದ್ದು ಇಂದು ಇತಿಹಾಸ.
ಅದೇ ಶ್ರೀವತ್ಸ, ಇದೇ ರವಿ ಬೆಳಗೆರೆ ಅವರ ಇನ್ನೊಂದು ಕಾದಂಬರಿಯನ್ನು ಚಿತ್ರವಾಗಿಸಲು ಮುಂದಾಗಿದ್ದಾರೆ. ಅದಕ್ಕೆ ಅವರು ಆಯ್ಕೆ ಮಾಡಿಕೊಂಡಿದ್ದು 'ಭೀಮಾ ತೀರದ ಹಂತಕರು' ಚಿತ್ರವನ್ನು.
ಹೌದು. ಬೆಳಗೆರೆ ಅವರ ಹಾಯ್ ಬೆಂಗಳೂರು ವಾರ ಪತ್ರಿಕೆಯಲ್ಲಿ ಈ ಧಾರವಾಹಿ 2001ರಿಂದ 2003ರ ನಡುವಿನ ಅವಧಿಯಲ್ಲಿ ಪ್ರಕಟವಾಗಿತ್ತು. ಇದಾಗಿ ಏಳೆಂಟು ವರ್ಷ ಕಳೆದಿದೆ. ಅಂದಿನ ಘಟನೆಗಳು ಇಂದಿಗೂ ಪ್ರಸ್ತುತವಾಗಿವೆ. ಅವನ್ನು ಒಂದಿಷ್ಟು ಸಣ್ಣಪುಟ್ಟ ಮಾಪಾಡುಗಳೊಂದಿಗೆ ಚಿತ್ರವಾಗಿಸುತ್ತಿದ್ದೇನೆ ಎನ್ನುತ್ತಾರೆ ರವಿ ಶ್ರೀವತ್ಸ.
ಚಿತ್ರ ನಿರ್ಮಿಸುವ ಹೊಣೆಯನ್ನು ಅಣಜಿ ನಾಗರಾಜ್ ವಹಿಸಿಕೊಂಡಿದ್ದಾರೆ. ಚಿತ್ರದಲ್ಲಿ ಒಟ್ಟು ಏಳು ಮಂದಿ ಕಲಾವಿದರು ನಾಯಕನ ಪಾತ್ರದಲ್ಲಿ ನಟಿಸಲಿದ್ದಾರೆ. ಒಂದು ಮೂಲದ ಪ್ರಕಾರ ಸುದೀಪ್, ದಿಗಂತ್, ಶ್ರೀನಗರಕಿಟ್ಟಿ, ನಾಗಶೇಖರ್ ಹಂತಕರಾಗಿ ಆಯ್ಕೆಯಾಗಿದ್ದು ಉಳಿದ ಪಾತ್ರದ ಅನ್ವೇಷಣೆ ನಡೆದಿದೆ.
ನಾಯಕಿಯರಾಗಿ ಗಂಡ ಹೆಂಡತಿ ಖ್ಯಾತಿಯ ಸಂಜನಾ ಹಾಗೂ ರಾಧಿಕಾ ಪಂಡಿತ್ ಹೆಸರು ಮುಖ್ಯವಾಹಿನಿಯಲ್ಲಿ ಕೇಳಿ ಬರುತ್ತಿದೆ. ಇದರ ಜತೆ ತಂತ್ರಜ್ಞರ ಆಯ್ಕೆ ಕಾರ್ಯವೂ ಜಾರಿಯಲ್ಲಿದೆ. ಅಕ್ಟೋಬರ್ ಅಂತ್ಯದಲ್ಲಿ ಚಿತ್ರದ ಮುಹೂರ್ತ ನಡೆಯಲಿದೆಯಂತೆ.