ನಿಧಾನವಾದ್ರೂ ಉತ್ತಮ ಚಿತ್ರವನ್ನೇ ನೀಡ್ತೇನೆ: ಗುರುಪ್ರಸಾದ್
PR
ಕನ್ನಡ ಚಿತ್ರರಂಗ ಎದುರಿಸುತ್ತಿರುವ ಗಂಭೀರ ವಿಷಯವನ್ನು ಇಟ್ಟು ಹಾಸ್ಯ ಚಿತ್ರಗಳ ನಿರ್ದೇಶಕ ಗುರು ಪ್ರಸಾದ್ 'ಡೈರೆಕ್ಟರ್ ಸ್ಪೆಷಲ್' ಹೊಸ ಚಿತ್ರ ಮಾಡುತ್ತಿರುವುದು ಗೊತ್ತಿರುವ ವಿಚಾರವೇ ಬಿಡಿ. ನಾಲ್ಕೈದು ತಿಂಗಳ ಹಿಂದೇ ಆರಂಭವಾಗಬೇಕಿದ್ದ ಚಿತ್ರ ಇದೀಗ ಶುರುವಾಗುತ್ತಿದೆ. ಅದ್ಯಾಕೆ ನಾಲ್ಕೈದು ತಿಂಗಳ ಗ್ಯಾಪ್ ಎಂದರೆ, ಇದು ತಡವೇನು ಅಲ್ಲವಲ್ಲ ಎನ್ನುತ್ತಾರೆ ಗುರು. ಈಗಾಗಲೇ ಮಠ ಹಾಗೂ ಎದ್ದೇಳು ಮಂಜುನಾಥ ಚಿತ್ರಗಳ ಯಶಸ್ಸು ಬೆನ್ನಿಗಿರುವ ಗುರುಗೆ ಇದೊಂದು ಚಾಲೆಂಜಿಂಗ್ ಚಿತ್ರವಂತೆ. ಹೊಸಬರ ತಂಡ ಕಟ್ಟಿಕೊಂಡು, ಹೊಸಬರನ್ನೇ ಹಾಕಿಕೊಂಡು ಚಿತ್ರ ಮಾಡುತ್ತಿದ್ದಾರಂತೆ.
ಎರಡು ತಿಂಗಳಿಗೆ ಒಂದರಂತೆ 200 ಚಿತ್ರ ಮಾಡಿ ಸಾಯುವ ಬದಲು ಇಡೀ ಜೀವನದಲ್ಲಿ 20 ಚಿತ್ರವನ್ನಾದರೂ ಸರಿ ಸಿದ್ಧಪಡಿಸಿ ಹೆಸರು ಮಾಡಿ ಸಾಯುವ ಆಶಯ ನನ್ನದು. ಇದಕ್ಕಾಗಿ ನಿಧಾನವಾದರೂ ಸರಿ, ಅವಸರಕ್ಕೆ ಬಿದ್ದು ಏನನ್ನೊ ಮಾಡಿ ಕೊಡುವುದಿಲ್ಲ. ಇಂದು ಕನ್ನಡ ಚಿತ್ರರಂಗದಲ್ಲಿ ಪ್ರೀತಿ- ಪ್ರೇಮ, ಹೊಡಿ-ಬಡಿ, ಅಣ್ಣ- ತಂಗಿ ಹಾಗೂ ತಾಯಿ-ಮಗ ನಡುವಿನ ಪ್ರೀತಿಯನ್ನು ಹೊಂದಿರುವ ನಾಲ್ಕು ಮಾದರಿಯ ಚಿತ್ರಗಳು ಮಾತ್ರ ಬರುತ್ತಿವೆ. ಆದರೆ ಇರಾನಿ ಭಾಷೆಯಲ್ಲಿ ಆ ರೀತಿ ಪರಿಸ್ಥಿತಿ ಇಲ್ಲ. ಭಿನ್ನ ಚಿತ್ರಗಳೂ ಬರುತ್ತಿವೆ. ನಾವು ಅದನ್ನು ಅನುಸರಿಸಿದರೆ ಉತ್ತಮ ಎನ್ನುತ್ತಾರೆ.
ನನ್ನನ್ನು ನಂಬಿರುವ ಹುಡುಗರ ಒಂದು ಚಿತ್ರತಂಡ ಕಟ್ಟಿಕೊಂಡಿದ್ದೇನೆ. ವಿಳಂಬವಾದರೂ ಅವರು ತಾಳಿಕೊಳ್ಳುತ್ತಾರೆ. ಇಂದು ಚಿತ್ರ ನೋಡಲು ಪ್ರೇಕ್ಷಕ ಹಣ ಕೊಟ್ಟು ಬರುತ್ತಾನೆ. ಬಂದಿದ್ದಕ್ಕೆ ಉತ್ತಮ ಹಾಸ್ಯ, ಸಂಭಾಷಣೆ, ದೃಶ್ಯ ಇರಲಿ ಅಂತ ಬಯಸುತ್ತಾನೆ. ಆದರೆ ಹೆಚ್ಚಿನ ಚಿತ್ರಗಳಲ್ಲಿ ಹಳಸಲು ಸಂಭಾಷಣೆ, ದೃಶ್ಯ ಹಾಗೂ ಹಾಸ್ಯ ಕಂಡು ಬರುತ್ತದೆ. ಇದು ಬದಲಾಗಬೇಕು ಎನ್ನುತ್ತಾರೆ. ಇದಕ್ಕೆ ಸೂಟ್ ಅಗುವ ರೀತಿ ತಾವು ಚಿತ್ರ ಮಾಡುತ್ತೇವೆ ಎನ್ನುತ್ತಾರೆ.