ನನ್ನ ಪ್ರೀತಿಯ ರಾಮು ಎಂಬ ವಿಶಿಷ್ಟ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಿದ್ದ ಪರಿ ನಿಮಗೆಲ್ಲಾ ಗೊತ್ತಿದೆ. ಈ ಚಿತ್ರದಲ್ಲಿ ಇನ್ನೊಬ್ಬ ಸಾಧಕ ಇದ್ದ. ಆತನೇ ಸಂಜಯ್. ಇವರ್ಯಾರು ಅತ ಯೋಚಿಸುತ್ತಿದ್ದೀರಾ? ಹೌದು, ಅಂದು ಚಿತ್ರದಲ್ಲಿ ದರ್ಶನ್ ಗೆಲ್ಲುವಲ್ಲಿ ಇವರ ಕ್ಯಾಮರಾ ಕೈಚಳಕ ಅತ್ಯಂತ ಸಹಕಾರಿಯಾಗಿತ್ತು.
ಇದೇ ಸಂಜಯ್ ಕೊಂಚ ವಿರಾಮದ ನಂತರ ಮತ್ತೊಮ್ಮೆ ಪ್ರೇಮ ಕಾವ್ಯವೊಂದಕ್ಕೆ ಕಣ್ಣಾಗಲಿದ್ದಾರೆ. ಚಿತ್ರದ ಹೆಸರು ರಾಜಿ. ಹಿಂದೆ ಈ ಚಿತ್ರದ ನಿರ್ದೇಶಕರು ಪಕ್ಕಾ ಕ್ಲಾಸ್ ಸಿನಿಮಾ ಮಾಡಿದ್ದರು. ಆದರೆ ಜನ ಅದನ್ನು ಒಪ್ಪಿಕೊಂಡಿರಲಿಲ್ಲ. ಇದಕ್ಕಾಗಿ ಈಗ ನಿರ್ಮಿಸುತ್ತಿರುವ ಚಿತ್ರಕ್ಕೆ ಕಮರ್ಷಿಯಲ್ ಟಚ್ ನೀಡಿದ್ದಾರೆ. ಆದ್ದರಿಂದ ತಮಗೆ ಇದು ಇನ್ನೊಂದು ಹೊಸ ಅನುಭವ ನೀಡುವ ಚಿತ್ರವಾಗಲಿದೆ ಎನ್ನುವುದು ಸಂಜಯ್ ಮಾತು.
ನಾನು ರಾಮು ಮೂಲಕ ಒಂದು ಹಂತದ ವರೆಗೆ ಜನರನ್ನು ಚಿತ್ರ ಮಂದಿರಕ್ಕೆ ಕರೆತಂದು ಕೂರಿಸುವ ಕೆಲಸ ಮಾಡಿದ್ದೇನೆ. ಇದೊಂದು ಅವಕಾಶ ಇನ್ನಷ್ಟು ಜನರನ್ನು ಸೆಳೆಯಲು. ಈ ವಿಷಯದಲ್ಲಿ ಪ್ರಾಮಾಣಿಕ ಯತ್ನ ಮಾಡುತ್ತೇನೆ. ನನ್ನ ಪ್ರೀತಿಯ ರಾಮು ಚಿತ್ರದಲ್ಲಿ ಮನರಂಜನೆ ಇರಲಿಲ್ಲ. ಆದರೆ ರಾಜಿಯಲ್ಲಿ ಅದಕ್ಕೆ ಕೊರತೆ ಇಲ್ಲ. ಅದ್ದೂರಿತನ ವೈಭವಿಸಲಿದೆ. ಕೇವಲ ಹಾಡಿಗಾಗಿ 50 ಲಕ್ಷ ರೂ. ಖರ್ಚು ಮಾಡಲಾಗಿದೆ ಎನ್ನುತ್ತಾರೆ.
ಚಿತ್ರಕ್ಕೆ ಹಾಡನ್ನು ತರಲು ನಿರ್ದೇಶಕ ಜಾನ್ ಪೀಟರ್ 25 ಲಕ್ಷ ರೂ. ಸುರಿದಿದ್ದಾರಂತೆ. ಇನ್ನು ಹಾಡುಗಳ ಚಿತ್ರೀಕರಣಕ್ಕೆ ಉಳಿದ 25 ಲಕ್ಷ ಖರ್ಚಾಗಲಿದೆಯಂತೆ. ಮನೋಜ್ ಕುಮಾರ್ ಎಂಬ ಹೊಸ ಪ್ರತಿಭೆ ಚಿತ್ರಕ್ಕೆ ನಿರ್ಮಾಪಕರಾಗುವ ಜತೆಗೆ ನಾಯಕರಾಗಿ ನಟಿಸುತ್ತಿದ್ದಾರೆ. ಇವರು ಚಿತ್ರದ ಹಾಡು ಹಾಗೂ ಚಿತ್ರವನ್ನು ಜನರಿಗೆ ಅತಿ ಸುಲಭವಾಗಿ ತಲುಪಿಸಲು ನಿರ್ಧರಿಸಿದ್ದಾರೆ. ಪ್ರತಿ ಮನೆಗೂ ತಮ್ಮ ಚಿತ್ರದ ಧ್ವನಿ ಸುರುಳಿ ತೆರಳಲಿ ಎಂಬ ಆಶಯದಿಂದ ಕೇವಲ 25 ರೂ.ಗೆ ಹಾಡಿನ ಧ್ವನಿ ಸುರುಳಿ ನೀಡಲು ನಿರ್ಧರಿಸಿದ್ದಾರಂತೆ. ಚಿತ್ರಕ್ಕೆ ರಾಣಿ ಹಾಗೂ ಸ್ವಾತಿ ಎಂಬ ಇಬ್ಬರು ನಾಯಕಿಯರು ಇದ್ದಾರಂತೆ. ಚಿತ್ರದ ಧ್ವನಿಸುರುಳಿ ಇತ್ತೀಚೆಗೆ ಮಾರುಕಟ್ಟೆಗೆ ಬಂದಿದ್ದು, ಚಿತ್ರವೂ ಬಹು ಬೇಗ ಬರಲಿದೆ ಎನ್ನಲಾಗುತ್ತಿದೆ.