ಇದೇನು ಸಿನಿಮಾ ಸುದ್ದಿಯಲ್ಲಿ ಇಡ್ಲಿ, ಚಟ್ನಿ ಸಾಂಬಾರು ಅನ್ನೋ ಸುದ್ದಿಯಿದೆಯಲ್ಲ ಅಂತ ಕನ್ಫ್ಯೂಸ್ ಮಾಡಬೇಡಿ. ಕನ್ನಡ ಸಿನೆಮಾದಲ್ಲಿ ಹಾಡುಗಳ ಯುಗವೇ ಆರಂಭವಾಗಿದೆ. ಯಾವಾಗ ಯೋಗರಾಜ ಭಟ್ಟರ ಹಳೆ ಪಾತ್ರೆ ಕಳೇ ಕಬ್ಣ... ಹಿಟ್ ಆಯ್ತೋ ಅಲ್ಲಿಂದಲೇ ಇಂಥ ಚಿತ್ರವಿಚಿತ್ರ ಗೀತೆಗಳೂ ಹುಟ್ಟಿಕೊಳ್ಳಲು ಶುರುವಾಗಿದೆ. ಮುಂಗಾರು ಮಳೆ ಹಿಟ್ ಆದಾಗ ಕನ್ನಡ ಚಿತ್ರರಂಗದಲ್ಲಿ ಹಲವರು ಮಳೆ ಸುರಿಸಲು ಆರಂಭಿಸಿದರೂ ಎಲ್ಲರೂ ಭಟ್ಟರಾಗೋದಕ್ಕೆ ಸಾಧ್ಯವಿಲ್ಲ ಎಂಬುದು ನಿಜವಾದ್ರೂ, ಅನುಕರಣೆ, ಪ್ರೇರಣೆ ಎಲ್ಲಾ ಕಲಾರಂಗದಲ್ಲಿ ಸಾಮಾನ್ಯ.
ಇಲ್ಲಿ ಇಷ್ಟೆಲ್ಲ ಪೀಠಿಕೆ ಬರೋದಕ್ಕೆ ಕಾರಣ ಇದೆ. ಇದೀಗ ಮತ್ತೊಂದು ಹೊಸ ಹಾಡು ಸದ್ಯದಲ್ಲೇ ಸದ್ದು ಮಾಡಲಿದೆ. ವಿಜಯ್ ಅಭಿನಯದ ಕರಿಚಿರತೆ ಚಿತ್ರದಲ್ಲಿ ಇಡ್ಲಿ, ಸಾಂಬಾರ್, ಚಟ್ನಿ ವಿಷಯ ಇದೆಯಂತೆ. ಹಾಡೊಂದರಲ್ಲಿ ಇಡ್ಲಿ ವಿಚಾರ ಬರುತ್ತಂತೆ. ಚಿತ್ರದಲ್ಲಿ ವಿಜಯ್ (ಚಿತ್ರದಲ್ಲಿ ಶಿವಲಿಂಗು) ಅವರನ್ನು ಇಡ್ಲಿಗೆ ಹೋಲಿಸಿದರೆ, ಯಜ್ಞಾ ಶೆಟ್ಟಿ ಹಾಗೂ ಶರ್ಮಿಳಾ ಮಾಂಡ್ರೆಯನ್ನು ಚಟ್ನಿ ಹಾಗೂ ಸಾಂಬಾರ್ಗೆ ಹೋಲಿಸುತ್ತಾರಂತೆ.
ಕರಿಚಿರತೆಯಲ್ಲಿ ವಿಭಿನ್ನ ಪಾತ್ರ ನಿರ್ವಹಿಸಿರುವ ಯಜ್ಞಾ ಶೆಟ್ಟಿಗೆ ತಮ್ಮ ಪಾತ್ರದ ಬಗ್ಗೆ ತೃಪ್ತಿಯಿದೆ. ಎದ್ದೇಳು ಮಂಜುನಾಥ ಚಿತ್ರದಲ್ಲಿ ಅಳುಮುಂಜಿಯಾಗಿ, ಹ್ಯಾಪಿ ಹಸ್ಬೆಂಡ್ನಲ್ಲಿ ಗ್ಲಾಮರ್ ಬೊಂಬೆಯಾಗಲಿರುವ ಯಜ್ಞಾ ಇಲ್ಲಿ ಕರಿಚಿರತೆಯ ಆತ್ಮೀಯ ಪ್ರೇಮಿ. ದುನಿಯಾ ವಿಜಯ್ಗೆ ನಾಯಕಿಯಾಗಿರುವ ಇವರು ಚಿತ್ರಕ್ಕಾಗಿ ಸಾಕಷ್ಟು ಹೊಸತನವನ್ನು ಮೈಗೂಡಿಸಿಕೊಂಡಿದ್ದಾರೆ. ಇದರ ಫಲವೇ ಚಿತ್ರದಲ್ಲಿ ಇವರಿಗೊಂದು ಸ್ಪೆಷಲ್ ಇಮೇಜ್ ಸಿಕ್ಕಿದೆಯಂತೆ. ಚಿತ್ರ ಬಿಡುಗಡೆ ನಂತರ ತಮ್ಮ ಅಭಿನಯಕ್ಕೆ ಸಾಕಷ್ಟು ಮನ್ನಣೆ ಸಿಗುತ್ತದೆ ಎನ್ನುವ ಆಶಯವನ್ನೂ ಅವರು ಹೊಂದಿದ್ದಾರೆ.
ಚಿತ್ರಕ್ಕಾಗಿ ಅವರು ಸಾಕಷ್ಟು ನೃತ್ಯಾಭಿನಯ ಕಲಿತಿದ್ದಾರಂತೆ. ಎದ್ದೇಳು ಮಂಜುನಾಥದಲ್ಲಿ ನೃತ್ಯಕ್ಕೆ ಅವಕಾಶ ಸಿಕ್ಕಿರಲಿಲ್ಲ. ಇಲ್ಲಿ ಸಿಕ್ಕಿದ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ಕರಿ ಚಿರತೆಯಲ್ಲಿ ಅವರು ಸೂಪರ್ ಸ್ಟೆಪ್ ಹಾಕಿದ್ದಾರೆ. ಅಭಿನಯದಲ್ಲಿ ಇವರಿಗೆ ಶರ್ಮಿಳಾ ಮಾಂಡ್ರೆ ಸಹ ಸ್ಪರ್ಧಿಯಂತೆ. ಈ ಇಬ್ಬರು ನಟಿಯರನ್ನು ಇಟ್ಟುಕೊಂಡು ನಿರ್ದೇಶಕ ಮಾದೇಶ್ ಚಿತ್ರದ ಗಿಮಿಕ್ ಮಾಡಿದ್ದಾರೆ. ಪ್ರೇಕ್ಷಕರಿಗೆ ಚಿತ್ರದಲ್ಲಿ ಯಾವುದೇ ಕೊರತೆ ಕಾಡದಂತೆ ನಿರ್ದೇಶಕರು ನೋಡಿಕೊಂಡಿದ್ದಾರೆ ಎಂಬುದು ಚಿತ್ರತಂಡದ ಅಂಬೋಣ.