ಶ್ರೀ ನಾಗಶಕ್ತಿ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು, ಸದ್ಯ ನಾಗರ ಪಂಚಮಿ ಕುರಿತ ಹಾಡೊಂದರ ಚಿತ್ರೀಕರಣ ಬೆಂಗಳೂರಿನ ದೊಡ್ಡಾಲದಮರ ಸಮೀಪ ಇರುವ ಮುಕ್ತಿನಾಗದಲ್ಲಿ ಭರದಿಂದ ಸಾಗಿದೆ.
ಇಲ್ಲೊಂದು ಭರ್ಜರಿ ಸೆಟ್ ಹಾಕಲಾಗಿದ್ದು, ಒಂದು ಕೃತಕ ಹುತ್ತ ಹಾಗೂ ಶಿವಲಿಂಗ ನಿರ್ಮಿಸಿಕೊಳ್ಳಲಾಗಿದೆ. ಚಿತ್ರದ ಈ ಹಾಡಿಗೆ ರಾಮ್ ಕುಮಾರ್, ಶಿವಕುಮಾರ್ ಹಾಗೂ ಶ್ರುತಿ ಹೆಜ್ಜೆ ಹಾಕಿದರು. ಚಿತ್ರದ ಹೆಸರೇ ಹೇಳುವಂತೆ ಈ ಚಿತ್ರಕ್ಕೆ ನಾಗರ ಪಂಚಮಿ ಅತಿ ದೊಡ್ಡ ಹಬ್ಬ. ಅದನ್ನು ವ್ಯವಸ್ಥಿತ ರೀತಿ ಕಟ್ಟಿಕೊಡುವ ಯತ್ನ ಚಿತ್ರ ತಂಡದ್ದು. ಅದಕ್ಕಾಗಿ ಅತ್ಯಂತ ಮುತುವರ್ಜಿಯಿಂದ ಈ ಹಾಡಿನ ಚಿತ್ರೀಕರಣ ನಡೆಸಲಾಗುತ್ತಿದೆ. ಹೀಗಾಗಿ ನಾಗರ ಪಂಚಮಿಯನ್ನು ಈ ಹಾಡಿನ ಮೂಲಕ ಆಚರಿಸಿಕೊಂಡರು.
ಹಾಡಿಗಾಗಿ ಎಲ್ಲರೂ ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದರು. ಓಂ ಸಾಯಿಪ್ರಕಾಶ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರುತ್ತಿದೆ. ಸೆಂಟಿಮೆಂಟ್ ಹಾಗೂ ಭಕ್ತಿ ಪ್ರದಾನ ಚಿತ್ರಗಳು ಇವರಿಗೆ ಸಾಕಷ್ಟು ಯಶಸ್ಸು ತಂದುಕೊಟ್ಟಿದ್ದು, ಈ ನಿಟ್ಟಿನಲ್ಲಿ ಈ ಚಿತ್ರದ ಮೇಲೂ ಅವರು ಅಪಾರ ನಿರೀಕ್ಷೆ ಹೊಂದಿದ್ದಾರೆ. ಇವರಿಗೆ ಈ ಚಿತ್ರದಲ್ಲಿ ಸಾಥ್ ನೀಡಿದ್ದು ನಟಿ ಹಾಗೂ ನಿರ್ಮಾಪಕಿ ಚಂದ್ರಿಕಾ.
ಚಿತ್ರಕ್ಕೆ ಈ ಹಾಡು ಮೆರುಗು ನೀಡುತ್ತದೆ. ಇದಕ್ಕಾಗಿ ಇಷ್ಟೊಂದು ತನ್ಮಯವಾಗಿ ಅಭಿನಯಿಸಿದ್ದೇವೆ. ಎಲ್ಲರೂ ಈ ಹಾಡಿನಲ್ಲಿ ಅತ್ಯಂತ ಮುತುವರ್ಜಿಯಿಂದ ಭಾಗವಹಿಸಿದ್ದಾರೆ. ಚಿತ್ರಕ್ಕೆ ಇದು ಮಹತ್ವದ ಭಾಗ ಎನಿಸಲಿದೆ ಎನ್ನುವುದು ಅವರ ಅಭಿಪ್ರಾಯ.