ದರ್ಶನ್ ಅಭಿನಯದ ಶೌರ್ಯ ಆರಂಭದಲ್ಲಿ ಉತ್ತಮ ಓಪನಿಂಗ್ ಕಂಡರೂ ಈಗ ಸಾಮಾನ್ಯ ಅನ್ನುವ ರೀತಿ ಓಡುತ್ತಿದೆ. ತೋಪೇಳುವ ಸ್ಥಿತಿ ಇಲ್ಲವಾಗಿದ್ದು, ಹೂಡಿದ ಹಣಕ್ಕೆ ಅಡ್ಡಿಯಿಲ್ಲ ಎನ್ನಬಹುದೇನೋ.
ಕಳೆದ ವಾರ ಬಿಡುಗಡೆ ಆದ ಸಾಧು ಕೋಕಿಲ ನಿರ್ದೇಶನದ ಈ ಹೊಡಿ, ಬಡಿ ಚಿತ್ರ ಪಡ್ಡೆ ಹುಡುಗರನ್ನು ಅಪಾರವಾಗಿ ಸೆಳೆದಿದೆ. ಪೊಲೀಸ್ ಅಧಿಕಾರಿಯಾಗಿ ದರ್ಶನ್ ಮತ್ತೆ ಕಾಣಿಸಿಕೊಂಡಿದ್ದು, ಚಿತ್ರದ ತುಂಬಾ ಖಾಕಿ ಖದರು ಮೆರೆದಿದ್ದಾರೆ. ಇದೊಂದು ಕಮರ್ಷಿಯಲ್ ಸಿನಿಮಾ. ತೆಲುಗಿನ ರಿಮೇಕ್ ಆಗಿದ್ದರೂ, ಇಲ್ಲಿನ ಸ್ಥಳೀಯತೆಗೆ ಹೊಂದುವಂತೆ ಒಂದಿಷ್ಟು ಮಾರ್ಪಾಡು ಮಾಡಲಾಗಿದೆ.
ಚಿತ್ರದಲ್ಲಿ ಒಟ್ಟು 5 ಹಾಡುಗಳಿದ್ದು, 2 ಹಾಡನ್ನು ಯೋಗರಾಜ್ ಭಟ್ ಹಾಗೂ ಉಳಿದ ಮೂರನ್ನು ನಾಗೇಂದ್ರ ಪ್ರಸಾದ್ ಬರೆದಿದ್ದಾರೆ. ಸುಂಟರಗಾಳಿ, ಅನಾಥರು ಸೇರಿದಂತೆ ಹಲವು ಚಿತ್ರಗಳ ಜತೆ ಈಗ ದರ್ಶನ್- ಸಾಧು ಕಾಂಬಿನೇಷನ್‌ನ ಇನ್ನೊಂದು ಚಿತ್ರವೂ ಹಿಟ್ ಆಗುವ ಲಕ್ಷಣ ತೋರಿದೆ.
ಹೊಸ ಸಿನಿಮಾ ನೋಡಿ ಹಳೆ ಸಿನಿಮಾ ಮರೆತರೆ ಹೊಸ ಸಿನಿಮಾ ಗೆದ್ದಿತು ಎಂದು ಅರ್ಥ. ಹೊಸ ಚಿತ್ರ ನೋಡಿದ ನಂತರವೂ ಹಳೆ ಚಿತ್ರ ನೆನಪಿನಲ್ಲಿ ಉಳಿಯಿತು ಅಂದರೆ ಆ ಹೊಸ ಚಿತ್ರ ಸೋತಂತೆ ಅನ್ನುತ್ತಾರೆ ದರ್ಶನ್. ಈ ಯಶಸ್ಸನ್ನು ಜನ ಎಷ್ಟು ದಿನ ಕೊಂಡಾಡುತ್ತಾರೆ ಅನ್ನುವುದರ ಮೇಲೆ ಚಿತ್ರದ ಯಶಸ್ಸು ನಿಂತಿದೆ.