ಕನ್ನಡದ ನಂ.1 ನಾಯಕ ನಟ ಪುನಿತ್ ರಾಜ್ ಕುಮಾರ್ ಇದುವರೆಗೂ ಇವರು ಅಭಿನಯಿಸಿದ ಚಿತ್ರಗಳೆಲ್ಲಾ ಅಪ್ಪಟ ಕಮರ್ಷಿಯಲ್ ಚಿತ್ರಗಳು. ಸೊಗಸಾದ ಹಾಡು, ಫೈಟ್, ಹೊಡೆದಾಟ, ಕೊಂಚ ಹೀರೋಯಿಸಂ, ಡೈಲಾಗುಗಳ ಸುರಿಮಳೆ ಹೀಗೆ ಕಮರ್ಷಿಯಲ್ ಚಿತ್ರಕ್ಕೆ ಬೇಕಾದ್ದೆಲ್ಲವೂ ಇವರ ಚಿತ್ರಗಳಲ್ಲಿ ಇರುತ್ತಿದ್ದುದರಿಂದಲೋ ಏನೋ ಪುನೀತ್ ಮಾಸ್ ಹೀರೋ ಆಗಿಯೇ ಮಿಂಚಿದ್ದರು. ಆದರೆ ಕಮರ್ಷಿಯಲ್ ಚಿತ್ರಗಳಲ್ಲಿ ನಟಿಸುವವರು ಕಲಾತ್ಮಕ ಚಿತ್ರಗಳೆಡೆಗೆ ದೃಷ್ಟಿ ಹರಿಸುವುದು ಕೊಂಚ ಕಡಿಮೆಯೇ ಎಂದರೆ ತಪ್ಪಲ್ಲ.
ಆದರೆ, ಹೆಸರಾಗಿ ಉಳಿಯುವ ಕಲಾತ್ಮಕ ಚಿತ್ರದಲ್ಲಿ ನಟಿಸುತ್ತೀರಾ ಅಂತ ಇದೇ ಪುನೀತ್ ಬಳಿ ಕೇಳಿದರೆ, ಯಾಕಿಲ್ಲ, ಉತ್ತಮ ಚಿತ್ರ ಸಿಕ್ಕರೆ ನಟಿಸಲು ಸಿದ್ಧ ಅಂತ ಹೇಳುತ್ತಾರೆ. ಗಿರೀಶ್ ಕಾಸರವಳ್ಳಿ ಅವರಂಥ ಪ್ರಬುದ್ಧ ಕಲಾತ್ಮಕ ನಿರ್ದೇಶಕರ ಚಿತ್ರದಲ್ಲಿಯೂ ನಾನು ನಟಿಸಲು ಸಿದ್ಧ. ಆದರೆ ಇದು ಕೇವಲ ಏಳೆಂಟು ಮಂದಿ ಮಾತ್ರ ಸೀಮಿತವಾಗಿರುವ ಚಿತ್ರ ಅಗಬಾರದು ಅಷ್ಟೆ ಎನ್ನುತ್ತಾರೆ.
ಇದುವರೆಗೂ ಆಕ್ಷನ್ ಹಾಗೂ ಡಾನ್ಸ್ ಮೂಲಕ ಪ್ರೇಕ್ಷಕರನ್ನು ಸೆಳೆದಿದ್ದ ಪುನಿತ್ ಪೃಥ್ವಿ ಚಿತ್ರದ ಮೂಲಕ ಈ ವರ್ಗದ ಪ್ರೇಕ್ಷಕರನ್ನು ಕೊಂಚ ನಿರಾಸೆಗೆ ಒಳಪಡಿಸಿ ಇನ್ನೊಂದು ವರ್ಗದ ಪ್ರೇಕ್ಷಕರ ಒಲವು ಗಳಿಸಿದ್ದರು. ಜಿಲ್ಲಾಧಿಕಾರಿಯಾಗಿ ಪುನಿತ್ ನಟಿಸಿದ್ದು ಕ್ಲಾಸ್ ಪ್ರೇಕ್ಷಕರನ್ನು ಥಿಯೇಟರಿಗೆ ಸೆಳೆದಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಇವರ ತಾಯಿ ಪಾರ್ವತಮ್ಮ ರಾಜ್‌ಕುಮಾರ್ ಬೆನ್ನು ತಟ್ಟಿ ಚೆನ್ನಾಗಿ ನಟಿಸಿದ್ದೀಯಾ ಮಗಾ ಅಂದರಂತೆ. ಇದುವರೆಗೂ ಇಷ್ಟೊಂದು ಅಭಿಮಾನದಿಂದ ಅವರು ಚಿತ್ರವನ್ನು ಶ್ಲಾಘಿಸಿರಲಿಲ್ಲ. ಈ ಚಿತ್ರದ ಮೂಲಕ ನನಗೆ ಆ ಭಾಗ್ಯ ಸಿಕ್ಕಿದೆ ಎನ್ನುತ್ತಾರೆ ಪುನೀತ್.
ಇದರಿಂದಲೇ ತಮ್ಮ ಚಿತ್ರವನ್ನು ಇನ್ನೊಂದು ವರ್ಗವೂ ಮೆಚ್ಚುತ್ತದೆ ಎನ್ನುವ ಅರಿವು ಅವರಿಗೆ ಆಗಿದೆ. ತುಂಬು ಕುಟುಂಬದ ಸದಸ್ಯನಾಗಿ ಇರುವ ಮಾದರಿಯ ಪಾತ್ರವನ್ನು ಮಾಡಲು ಇಷ್ಟ ಪಡುತ್ತೇನೆ. ಓಡಾಡಿಕೊಂಡಿರುವ ಲವಲವಿಕೆಯ ಪಾತ್ರ ಬೇಕು. ಕೋಟಿ ಹಣ ಸುರಿದು ಬಿಟ್ಟರೆ ಅದು ಉತ್ತಮ ಚಿತ್ರ ಅಗುವುದಿಲ್ಲ. ಚಿತ್ರ ನಿರ್ಮಾಣದಲ್ಲಿ ಕಲೆ ಇರಬೇಕು. ಇಂಥ ಕಲಾತ್ಮಕ್ಕ ಚಿತ್ರ ಸಿಕ್ಕರೆ ನಟಿಸಲು ಸಿದ್ಧ ಎಂದಿದ್ದಾರೆ ಪುನೀತ್.