ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಬೆಟ್ಟದಲ್ಲಿ ಗುಟ್ಟಾಗಿ ಮದುವೆಯಾದ ರತ್ನಜ; ರಟ್ಟಾಗಿದ್ದಕ್ಕೆ ಸಿಟ್ಟು! (Rathnaja | Marriage | Amoolya Rathnaja Kissing | Premism | Nenapirali)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ನಟಿ ಅಮೂಲ್ಯ ಸಮ್ಮುಖದಲ್ಲಿ ಚಲನಚಿತ್ರ ನಿರ್ದೇಶಕ ರತ್ನಜ ಅವರು ಪ್ರಿಯದರ್ಶಿನಿ ಅವರನ್ನು ವರಿಸುವ ಮೂಲಕ ಗಾಂಧಿನಗರದಲ್ಲಿ ಉಂಟಾಗಿದ್ದ ಗಾಳಿ ಸುದ್ದಿಗಳಿಗೆ ತೆರೆ ಎಳೆದಿದ್ದಾರೆ. ಜೊತೆಗೆ ಮದುವೆಯ ಚಿತ್ರೀಕರಣಕ್ಕೆಂದು ಬಂದ ಮಾಧ್ಯಮದ ಮಂದಿಯ ಮೇಲೆ ಹಲ್ಲೆ ನಡೆಸಿ ತನ್ನ ಇನ್ನೊಂದು ರೂಪವನ್ನೂ ಪ್ರದರ್ಶಿಸಿದ್ದಾರೆ.

ನೆನಪಿರಲಿ ಖ್ಯಾತಿ ನಿರ್ದೇಶಕ ರತ್ನಜ ತಮ್ಮ ಅಚ್ಚುಮೆಚ್ಚಿನ ತಾಣ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಗುರುವಾರ ಬೆಳಗ್ಗೆ ಪ್ರಿಯದರ್ಶಿನಿ ಅವರನ್ನು ಸರಳ ವಿವಾಹವಾದರು. ದೇವಸ್ಥಾನದ ಅರ್ಚಕ ಗೋಪಾಲಕೃಷ್ಣ ಭಟ್ ವಿವಾಹ ಕಾರ್ಯಕ್ರಮವನ್ನು ನೆರವೇರಿಸಿದರು. ಈ ವಿವಾಹಕ್ಕೆ ನಟಿ ಅಮೂಲ್ಯ ಸೇರಿದಂತೆ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ, ನಿರ್ದೇಶಕ ಪ್ರೇಮ್ ಸಾಕ್ಷಿಯಾದರು.

ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಬುಧವಾರ ರಾತ್ರಿಯಿಂದಲೇ ಸರಳ ವಿವಾಹಕ್ಕೆ ಸಿದ್ಧತೆಗಳು ನಡೆದಿದ್ದವು. ಹಂಸಲೇಖಾ, ನಟ ಪ್ರೇಮ್ ಹಾಗೂ ನಟಿ ಅಮೂಲ್ಯ ಗುರುವಾರ ಬೆಳಗ್ಗೆಯೇ ವಿವಾಹದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದರು. ಬೆಟ್ಟದಲ್ಲಿ ಅಮೂಲ್ಯ ಇದ್ದುದರಿಂದ ರತ್ನಜ ಅಮೂಲ್ಯ ಜತೆ ವಿವಾಹವಾಗಲಿದ್ದಾರೆ ಎಂಬ ಗಾಳಿ ಸುದ್ದಿ ಗುಂಡ್ಲುಪೇಟೆ ಸುತ್ತಮುತ್ತ ಹರಡಿತ್ತು. ಈ ಹಿನ್ನೆಲೆಯಲ್ಲಿ ಪಟ್ಟಣ ಹಾಗೂ ಇತರೆ ಕಡೆಗಳಿಂದ ನೂರಾರು ಮಂದಿ ಯುವಕರು ಗೋಪಾಲಸ್ವಾಮಿ ಬೆಟ್ಟಕ್ಕೆ ಆಗಮಿಸಿದ್ದರು.

ಆದರೆ ದೇವಸ್ಥಾನದ ಬಳಿಗೆ ತೆರಳಿದಾಗ ನಿಜಾಂಶ ತಿಳಿಯಿತು. ರತ್ನಜ ಹಾಗೂ ಪ್ರಿಯದರ್ಶಿನಿ ಅವರು ಮದುವೆ ಉಡುಪಿನಲ್ಲಿ ಫೋಟೋದವರಿಗೆ ಫೋಸು ಕೊಡುತ್ತಿದ್ದರು. ಇತ್ತ ಅಮೂಲ್ಯ ತಮ್ಮ ಅಭಿಮಾನಿಗಳೊಂದಿಗೆ ಭಾವಚಿತ್ರ ತೆಗೆಸಿಕೊಳ್ಳುವುರಲ್ಲಿ ಬಿಜಿಯಾಗಿದ್ದರು. ಹೀಗಾಗಿ ಗಾಂಧಿನಗರದ ಗಾಳಿಸುದ್ದಿಗೆ ಗೋಪಾಲಸ್ವಾಮಿ ಬೆಟ್ಟದಲ್ಲಿ ತೆರೆ ಬಿತ್ತು.

ಮಾಧ್ಯಮಗಳಿಗೆ ವಿರೋಧ: ರತ್ನಜ ಅವರ ವಿವಾಹದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತೆರಳಿದ್ದ ಸುವರ್ಣ ನ್ಯೂಸ್ ವರದಿಗಾರ ಹಾಗೂ ಕ್ಯಾಮರಾ ಮ್ಯಾನ್ ಅವರ ಮೇಲೆ ರತ್ನಜ ಹಾಗೂ ಅವರ ಸ್ನೇಹಿತರು ಹಲ್ಲೆ ಮಾಡಿದ್ದಾರೆ. ಇದು ನನ್ನ ಖಾಸಗಿ ವಿಚಾರ, ಇದನ್ನು ಚಿತ್ರೀಕರಿಸಬೇಡಿ ಎಂದು ನೇರವಾಗಿ ರತ್ನಜ ಅವರೇ ಕ್ಯಾಮರಾಮ್ಯಾನ್ ಕೈಯಿಂದ ಕ್ಯಾಮರಾ ಕಸಿದು ಅದರಲ್ಲಿದ್ದ ವಿಡಿಯೋ ಕ್ಯಾಸೆಟನ್ನು ವಶಪಡಿಸಿಕೊಂಡಿದ್ದಾರೆ. ಇದು ಮಾಧ್ಯಮದ ಮಂದಿಯನ್ನು ಕೆರಳಿಸಿದೆ.

ಸಿನಿಮಾ ಮಂದಿಯ, ಖ್ಯಾತನಾಮರ ಮದುವೆಯ ವಿಡಿಯೋ ಚಿತ್ರೀಕರಿಸಲು ಮಾಧ್ಯಮಗಳು ತೆರಳುವುದು ಸಾಮಾನ್ಯ. ಎಷ್ಟೋ ಸಿನಿ ತಾರೆಯರು ಮಾಧ್ಯಮಗಳಿಗೆ ಇದನ್ನು ಅವಕಾಶ ಮಾಡಿಕೊಟ್ಟಿದ್ದಾರೆ ಕೂಡಾ. ಅಲ್ಲದೆ ರತ್ನಜ ಅವರು ಯಾವುದೋ ನಟಿಯೊಬ್ಬರನ್ನು ಕದ್ದು ಮುಚ್ಚಿ ಮದುವೆಯಾಗುತ್ತಿಲ್ಲ ಎಂಬುದೂ ಕೂಡಾ ನಿಜ. ತನ್ನ ಸಂಬಂಧಿಕಳಾದ ಹುಡುಗಿಯನ್ನೇ ಗುರುಹಿರಿಯರಿದ್ದು ಎಲ್ಲರ ಸಮ್ಮುಖದಲ್ಲಿ ಮದುವೆಯಾಗುತ್ತಿರುವಾಗ ರತ್ನಜ ಅವರು ಇಂಥ ನಡವಳಿಕೆ ತೋರಿದ್ದು ಮಾತ್ರ ವಿಪರ್ಯಾಸ.

ಅದೇನೇ ಇರಲಿ, ರತ್ನಜ ಈ ರೀತಿ ವರ್ತಿಸುತ್ತಿರುವುದು ಇದೇ ಮೊದಲ ಬಾರಿಯೇನೂ ಅಲ್ಲ. ಅಂದೊಮ್ಮೆ ರಾಷ್ಟ್ರಪ್ರಶಸ್ತಿ ವಿಜೇತ ನಟಿ ತಾರಾ ಅವರನ್ನು ಎಲ್ಲರೆದುರೇ ಅವಮಾನಿಸಿದ್ದರು. ತಾನು ಕರೆದ ಸಮಾರಂಭಕ್ಕೆ ತಾರಾ ಕೊಂಚ ತಡವಾಗಿ ಬಂದಿದ್ದಕ್ಕೆ ನೇರವಾಗಿ ಅವರ ಮೇಲೆ ಎಲ್ಲರ ಸಮ್ಮುಖದಲ್ಲೇ ಅಗೌರವವಾಗಿ ಮಾತಾಡಿದ್ದಲ್ಲದೆ, ಅವರನ್ನು ವೇದಿಕೆಗೂ ಕರೆಯದೆ ಅವಮಾನಿಸಿದ್ದರು. ಮಾಧ್ಯಮಗಳು ತಮ್ಮ ಚಿತ್ರದ ಬಗ್ಗೆ ಉತ್ತಮ ವಿಮರ್ಶೆ ಬರೆಯದಿದ್ದುದಕ್ಕೂ ಮಾಧ್ಯಮಗಳ ಮೇಲೆ ಕೆಂಡ ಕಾರಿದ್ದರು. ತನ್ನ ಹಾಗೂ ಅಮೂಲ್ಯ ಅವರ ಚುಂಬನದ ಚಿತ್ರಗಳು ಮಾಧ್ಯಮಗಳಲ್ಲಿ ಸುದ್ದಿ ಮಾಡಿದರೂ ಆ ಬಗ್ಗೆ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ಸುಮ್ಮನಾಗಿದ್ದರು. ಆದರೆ ಅಮೂಲ್ಯ ಮಾತ್ರ ಅಳುತ್ತಾ ಇದೆಲ್ಲವೂ ನಕಲಿ ಫೋಟೋ ಎಂದು ಹೇಳಿದ್ದರು. ಕೊನೆಗೂ ಅದು ನಕಲಿಯೇ ಎಂದೂ ಸಾಬೀತಾಯಿತು ಬಿಡಿ. ಒಟ್ಟಾರೆ ರತ್ನಜ ಮ್ತತೊಮ್ಮೆ ತನ್ನ ಒರಟು ನಡವಳಿಕೆಯ ಚಾಳಿಯನ್ನು ಮಾತ್ರ ಮುಂದುವರಿಸಿದ್ದಾರೆಂಬುದು ಮಾತ್ರ ಸತ್ಯ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರತ್ನಜ, ಮದುವೆ, ಅಮೂಲ್ಯ, ನೆನಪಿರಲಿ, ಪ್ರೇಮ್, ಪ್ರೇಮಿಸಂ, ಹೊಂಗನಸು