ಅಂಬಾರಿ ಚಿತ್ರದ ಮೂಲಕ ಉತ್ತಮ ನಿರ್ದೇಶಕರಾಗಿ ಹೊರ ಹೊಮ್ಮಿರುವ ಅರ್ಜುನ್ರ ಅದ್ದೂರಿ ಚಿತ್ರದ ಮುಹೂರ್ತ ಅಗಿರುವುದು ನಿಮಗೆಲ್ಲಾ ಗೊತ್ತು. ಸಾಕಷ್ಟು ಗಣ್ಯರ ಸಮ್ಮುಖದಲ್ಲಿ ಚಿತ್ರಕ್ಕೆ ಕ್ಲಾಪ್ ಸಹ ಮಾಡಲಾಗಿದೆ.
ಅದ್ದೂರಿ ಚಿತ್ರ ನಿಜಕ್ಕೂ ಅದ್ದೂರಿಯೇ ಆಗಿದೆ ಎನ್ನುವುದು ಅರ್ಜುನ್ ಉವಾಚ. ತಮ್ಮ ಅಂಬಾರಿ ಚಿತ್ರ ನೋಡಿದ ಜನ ಅದೇ ಗುಂಗಿನಲ್ಲಿ ಇದ್ದಾರೆ. ಇದರಿಂದ ಅವರನ್ನು ಹೊರ ತರುವ ಜತೆಗೆ ಅದರ ಸ್ಥಾನದಲ್ಲಿ ಅದ್ದೂರಿಯನ್ನು ಕೂರಿಸಬೇಕಾಗಿದೆ. ಇದು ಸುಲಭದ ಕಾರ್ಯವಲ್ಲ. ಜನ ನನ್ನ ಅಂಬಾರಿ ನೋಡಿ ಮೆಚ್ಚಿದ್ದಾರೆ. ಅವರಿಗೆ ಈಗ ಇನ್ನಷ್ಟು ಹೊಸ ನಿರೀಕ್ಷೆಗಳು ಇವೆ. ಅದನ್ನು ನಾನು ಈಡೇರಿಸಬೇಕು ಎನ್ನುತ್ತಾರೆ.
ತಮ್ಮ ಪ್ರತಿ ಪ್ರಯತ್ನಕ್ಕೆ ನಿರ್ಮಾಪಕ ಶಂಕರ್ ರೆಡ್ಡಿ ಉತ್ತಮ ಸಾಥ್ ನೀಡಿದ್ದಾರಂತೆ. ನಟ ದ್ರುವ ಈ ಚಿತ್ರದ ಮೂಲಕ ತಮ್ಮ ಕನಸನ್ನು ಈಡೇರಿಸಿಕೊಳ್ಳಲು ಮುಂದಾಗಿದ್ದಾರೆ. ನಟಿ ರಾಧಿಕಾ ಪಂಡಿತ್ ಹಲವು ಪ್ರಶಸ್ತಿಗಳ ಖುಷಿಯಲ್ಲಿ ಈ ಅದ್ದೂರಿ ಚಿತ್ರಕ್ಕೆ ಇನ್ನಷ್ಟು ಬೆಡಗು ತುಂಬಲಿದ್ದಾರಂತೆ.
ಇದೊಂದು ಪ್ರೇಮಕಥೆಯಾಗಿದ್ದು, ಚಿತ್ರ ವೀಕ್ಷಿಸಿದ ನಂತರವೇ ಇದರ ಸ್ವಾರಸ್ಯ ತಿಳಿಯುತ್ತದಂತೆ. ಇದಕ್ಕಾಗಿ ಸಾಕಷ್ಟು ಶ್ರಮ ತೊಡಗಿಸಿದ್ದೇನೆ. ಜನರನ್ನು ರಂಜಿಸುವ ಜತೆ ಸಂದೇಶವನ್ನೂ ಇರಿಸಿದ್ದೇನೆ ಎನ್ನುತ್ತಾರೆ. ಸಮಾರಂಭದಲ್ಲಿ ಉಪಸ್ಥಿತರಿದ್ದ ಅಂಬರೀಷ್ ಈ ಚಿತ್ರದ ಬಗ್ಗೆ ಮೆಚ್ಚುಗೆ ಮಾತನ್ನಾಡಿ ಯುವ ಪೀಳಿಗೆ ಕನ್ನಡ ಚಿತ್ರರಂಗಕ್ಕೆ ಬರಲಿ. ಕರ್ನಾಟಕ ಚಿತ್ರರಂಗ ಬೆಳೆಯಲಿ ಎಂದು ಆಶಿಸಿದರು. ನಟ ಅರ್ಜುನ್ ಸರ್ಜಾ ಸಹ ಉಪಸ್ಥಿತರಿದ್ದು, ದ್ರುವ ಸರ್ಜಾ ಹಾರ್ಡ್ ವರ್ಕ್ ಮಾಡಿದರೆ ಸಾಕಷ್ಟು ಮೇಲೆ ಬರಬಹುದು ಎಂದು ಆಶ್ವಾಸನೆ ನೀಡಿದರು.