ಪಂಚರಂಗಿ ಚಿತ್ರದ ಮೂಲಕ ನಿರ್ಮಾಪಕರಾಗಿಯೂ ಭಡ್ತಿ ಪಡೆದಿರುವ ನಿರ್ದೇಶಕ ಯೋಗರಾಜ ಭಟ್ಟರು ಸದ್ಯಕ್ಕೆ ಸುದ್ದಿಯಲ್ಲಿರುವ ತೆರೆ ಹಿಂದಿನ ತಾರೆ. ಸದ್ಯ ಭಟ್ಟರು ಕಾಯ್ಕಿಣಿಯವರಷ್ಟೇ ಬೇಡಿಕೆಯ ಚಿತ್ರ ಸಾಹಿತಿ. ಯಾವಾಗ ಭಟ್ಟರ ಹಳೇ ಪಾತ್ರೆ ಹಳೇ ಕಬ್ಣ... ಹಾಡು ಹಿಟ್ ಆಯಿತೋ, ಅಂದಿನಿಂದ ಭಟ್ಟರು ಸದ್ಯ ಚಿತ್ರೋದ್ಯಮದಲ್ಲಿ ಬಹುಬೇಡಿಕೆಯ ಚಿತ್ರ ಸಾಹಿತಿಯಾಗಿ ಬದಲಾಗಿದ್ದಾರೆ. ಹೊಸ ಗಾನ ಬಜಾನಾ... ಮತ್ತಿತರ ಡಿಫರೆಂಟ್ ಹಾಡುಗಳನ್ನು ನೀಡುವ ಭಟ್ಟರ ಪ್ರಾಸ ಜೋಡಣೆಯೂ ಅದ್ಭುತ. ಇಂತಿಪ್ಪ ಭಟ್ಟರ ಪ್ರತಿಭೆಗೆ ಫಲವಾಗಿ ಅವರ ಹಾಡುಗಳ ದರವೂ ಏರಿದೆ.
ಅಂದಹಾಗೆ ಪಂಚರಂಗಿ ಹಾಗೂ ಜಾಕಿ ಚಿತ್ರದ ಹಾಡುಗಳು ಇಂದು ಮಾರುಕಟ್ಟೆಯಲ್ಲಿ ಬಿಸಿ ದೋಸೆಯಂತೆ ಸೇಲ್ ಆಗುತ್ತಿದ್ದು, ಈ ಚಿತ್ರಗಳು ಭಟ್ಟರಿಗೆ ಇನ್ನೊಂದು ಹೊಸ ಇಮೇಜ್ ತಂದುಕೊಟ್ಟಿದೆ.
ಸದ್ಯ ಭಟ್ಟರು ಒಂದು ಹಾಡಿಗೆ 75 ಸಾವಿರ ರೂ. ಪಡೆಯುತ್ತಿದ್ದು, ಇದು 1.5 ಲಕ್ಷಕ್ಕೆ ಏರಿಕೆ ಅಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಇದನ್ನು ಹೇಳಿದ್ದು ಇನ್ಯಾರೂ ಅಲ್ಲ. ಭಟ್ಟರ ಖಾಸಾ ದೋಸ್ತ್ ಸೂರಿ. ಸೂರಿಯ ಜಾಕಿ ಚಿತ್ರಕ್ಕೂ ಭಟ್ಟರು ಹಾಡು ಬರೆದಿದ್ದು, ಈ ಬಾರಿ ಸೂರಿ ಭಟ್ಟರಿಗೆ ಒಂದು ಹಾಡಿಗೆ 75 ಸಾವಿರ ನೀಡಿದ್ದಾರಂತೆ. ಹಾಗಂತ ಸೂರಿಯೇ ಬಾಯ್ಬಿಟ್ಟಿದ್ದಾರೆ. ಇದಕ್ಕೂ ಮೊದಲು ಭಟ್ಟರ ಒಂದು ಹಾಡಿಗೆ ಸೂರಿ 40 ಸಾವಿರ ನೀಡಿದ್ದರಂತೆ. ಜಾಕಿಯ ಹಾಡು ಹಿಟ್ ಆದ ಮೇಸಲೆ ಖಂಡಿತ ಭಟ್ಟರ ಸಂಭಾವನೆ 1.5ಲಕ್ಷಕ್ಕೇರಲಿದೆ ಎಂಬುದು ಸೂರಿಯ ಲೆಕ್ಕಾಚಾರ.
ಜಾಕಿ ಚಿತ್ರದ ಮೇಲೆ ಅಪಾರ ನಿರೀಕ್ಷೆ ಇರಿಸಿಕೊಂಡಿರುವ ಸೂರಿ ಖಂಡಿತವಾಗಿಯೂ ಹಾಡು ಯಶಸ್ಸು ಕಾಣುತ್ತೆ ಎಂಬ ಭವಿಷ್ಯ ನುಡಿದಿದ್ದಾರೆ. ಅವರ ಭವಿಷ್ಯಕ್ಕೆ ತಕ್ಕಂತೆ ಜಾಕಿಯ ಹಾಡಿಗೆ ಅತ್ಯದ್ಭುತ ಪ್ರತಿಕ್ರಿಯೆಯೂ ಕೇಳಿ ಬಂದಿದೆ. ಈ ಹಿಂದೆ ಜಂಗ್ಲಿ ಚಿತ್ರದಲ್ಲಿ ಹೊಸ ಪ್ರಯೋಗ ಮಾಡಿದ್ದೆ. ಈ ಹೊಸ ಪ್ರಯೋಗ ಸಕ್ಸಸ್ ಆಗಿತ್ತು. ಈಗಲೂ ಅದೇ ಲಾಜಿಕ್ ಬಳಸಿದ್ದೇನೆ. ಇನ್ನೊಮ್ಮೆ ಇಂತಿ ನಿನ್ನ ಪ್ರೀತಿಯ ಮಾದರಿಯ ಸೋಲು ಆಗದಂತೆ ನೋಡಿಕೊಳ್ಳುತ್ತೇನೆ ಎನ್ನುತ್ತಾರೆ ಸೂರಿ.