ತಮಿಳಿನಿಂದ ನಾಡೋಡಿಗಳ್ ರಿಮೇಕ್ ಆಗುತ್ತಿರುವುದು ನಿಮಗೂ ಗೊತ್ತಿದೆ. ಇದರಲ್ಲಿ ಕನ್ನಡದ ಅತ್ಯಂತ ಜನಪ್ರಿಯ ನಟ ಪುನಿತ್ ರಾಜ್ ಕುಮಾರ್, ಶ್ರೀನಗರ ಕಿಟ್ಟಿ ಹಾಗೂ ಲೂಸ್ ಮಾದ ಖ್ಯಾತಿಯ ಯೋಗೀಶ್ ನಟಿಸುತ್ತಿದ್ದು ನಾಯಕಿಯಾಗಿ ಕನ್ನಡದ ಸದ್ಯದ ಬಹು ಬೇಡಿಕೆಯ ನಟಿ ರಾಧಿಕಾ ಪಂಡಿತ್ ಸಾಥ್ ಅಭಿನಯಿಸುತ್ತಿರುವ ಸುದ್ದಿಯೂ ಹೊಸತಲ್ಲ. ಆದರೆ ವಿಶೇಷವೆಂದರೆ, ಈ ಚಿತ್ರಕ್ಕೆ ಸಂಭಾಷಣೆಯನ್ನು ಫಿಲಂಫೇರ್ ಪ್ರಶಸ್ತಿ ಪುರಸ್ಕ್ಕತ ಚಿತ್ರ ನಿರ್ದೇಶಕ ಗುರು ಪ್ರಸಾದ್ ಬರೆದಿದ್ದಾರೆ.
ಡಾ. ರಾಜ್ ಬ್ಯಾನರ್ ಅಡಿ ಒಂದು ಅವಕಾಶ ಸಿಗುವುದು ಅಂದರೆ ಬಹಳ ಕಷ್ಟದ ಹಾಗೂ ಅದೃಷ್ಟದ ಕೆಲಸ. ಇಂಥದ್ದೊಂದು ಸದವಕಾಶ ನನ್ನನ್ನು ಹುಡುಕಿ ಬಂದಿರುವುದು ನಿಜಕ್ಕೂ ಹಮ್ಮೆಯ ಸಂಗತಿ. ಇಷ್ಟು ವರ್ಷ ನಾನು ಚಿತ್ರರಂಗಕ್ಕಾಗಿ ಮಾಡಿದ ಕೆಲಸಕ್ಕೆ ಇದೀಗ ದೊಡ್ಡ ಪ್ರಮಾಣದಲ್ಲಿ ಫಲ ಸಿಕ್ಕಿದೆ. ಫಿಲಂಫೇರ್ ಪ್ರಶಸ್ತಿ ಇನ್ನೊಮ್ಮೆ ಸಿಕ್ಕಷ್ಟು ಖುಶಿ ಆಗಿದೆ ಎನ್ನುತ್ತಾರೆ ಗುರು ಪ್ರಸಾದ್.
ಇದೊಂದು ರಿಮೇಕ್ ಚಿತ್ರ ಆದರೂ ಇಲ್ಲಿ ಸ್ವಂತಿಕೆಗೆ ಸಾಕಷ್ಟು ಅವಕಾಶ ಇದೆ. ಉತ್ತಮ ಡೈಲಾಗುಗಳನ್ನು ಹೆಣೆಯುವ ಜವಾಬ್ದಾರಿ ನನ್ನ ಮೇಲಿದೆ. ಪುನಿತ್ ಅವರಿಗೆ ಇದೊಂದು ಬಹು ನಿರೀಕ್ಷೆಯ ಚಿತ್ರವಾಗಿದ್ದು, ಇದನ್ನು ವ್ಯವಸ್ಥಿತವಾಗಿ ಕಟ್ಟಿಕೊಡುವ ಹೊಣೆ ನನ್ನದಾಗಿದೆ ಎನ್ನುತ್ತಾರೆ ಗುರು.
ಗಜ, ರಾಮ್ ಚಿತ್ರವನ್ನು ನಿರ್ದೇಶಿಸಿರುವ ಮಾದೇಶ್ ಈ ಚಿತ್ರದ ನಿರ್ದೇಶಕ. ಈ ಚಿತ್ರದಲ್ಲಿ ಪುನಿತ್ ಜೊತೆಗೆ ಇದೇ ಮೊದಲ ಬಾರಿಗೆ ಕಿಟ್ಟಿ ಹಾಗೂ ಲೂಸ್ ಮಾದ ಅಭಿನಯಿಸುತ್ತಿದ್ದಾರೆ.