ನಟ ನಟಿಯರಿಗೆ ಫ್ಯಾನ್‌ಗಳ ಕಾಟ ಸಹಜ. ಆದರೆ ನೀವು ಎಲ್ಲಾದರೂ, ಚಿತ್ರ ಸಾಹಿತಿಗೂ ಅದೇ ಮಟ್ಟಿನ ಅಭಿಮಾನಿಗಳ ಕಾಟ ಇದೆ ಎಂದರೆ ನಂಬುತ್ತೀರಾ? ಹೌದು. ಆ ಚಿತ್ರ ಸಾಹಿತಿ ಇನ್ಯಾರೂ ಅಲ್ಲ. ಜಯಂತ ಕಾಯ್ಕಿಣಿ. ಜಯಂತ್ ಕಾಯ್ಕಿಣಿ 120 ಚಿತ್ರಗೀತೆಗಳನ್ನು ಬರೆದ ಸಂಭ್ರಮದಲ್ಲಿದ್ದಾರೆ. ಇಂಥ ಸಂದರ್ಭದಲ್ಲಿ ಅವರಿಗೆ ಅಭಿಮಾನಿ ಪ್ರೇಮಿಗಳ ಕಾಟ ಎದುರಾಗಿದೆಯಂತೆ.
ಇಂತಿಪ್ಪ ಜಯಂತ ಕಾಯ್ಕಿಣಿ ಅವರನ್ನು ಎಲ್ಲಿ ಕಂಡರೂ ಮುತ್ತಿಕೊಳ್ಳುವ ಅಭಿಮಾನಿಗಳು ಹಾಡಿನ ಬಗ್ಗೆ ವಿಪರೀತ ಪ್ರಶ್ನೆಗಳನ್ನು ಹರಿ ಬಿಡುತ್ತಾರಂತೆ. ಎಲ್ಲಿಂದಲೋ ಮೊಬೈಲ್ ಸಂಖ್ಯೆ ಪಡೆದುಕೊಂಡು ಕರೆ ಮಾಡುತ್ತಾರಂತೆ. ಮನೆ ಬಾಗಿಲಿಗೆ ಬಂದು ಮಾತನಾಡಿಸುತ್ತೇವೆ ಎನ್ನುತ್ತಾರಂತೆ. ಟ್ರಾಫಿಕಲ್ಲಿ ಸಿಕ್ಕರೂ ಮಾತಿಗೆ ಇಳಿಯುತ್ತಾರಂತೆ. ಇನ್ನೂ ಕೆಲವು ವಿರಹಿಗಳು ರಾತ್ರಿ ಹೊತ್ತಿನಲ್ಲಿ ಫುಲ್ ಟೈಟಾಗಿ ಕರೆ ಮಾಡಿ, ಏನ್ಸಾರ್, ನನ್ನದೇ ಜೀವನ ಕಥೆಯನ್ನೇ ಹಾಡು ಬರೆದಿದ್ದೀರಲ್ಲಾ ಸಾರ್ ಅಂತಾರಂತೆ. ಕಾಯ್ಕಿಣಿಯವರು ಇವೆಲ್ಲವನ್ನೂ ಕೇಳಿ ಫೋನ್ ಕಟ್ ಮಾಡುತ್ತಾರಂತೆ. ಕೆಲವೊಮ್ಮೆ ಹೊತ್ತಲ್ಲದ ಹೊತ್ತಿನಲ್ಲಿ ಕರೆ ಮಾಡುವ ಇಂತಹ ಭಗ್ನ ಪ್ರೇಮಿಗಳಿಂದ ತಪ್ಪಿಸಿಕೊಳ್ಳಲು ಕಾಯ್ಕಿಣಿ ತನ್ನ ಫೋನ್ ಸ್ವಿಚ್ ಆಫ್ ಮಾಡಿಕೊಳ್ಳಬೇಕಾಗುತ್ತದಂತೆ!
ಯುವ ಹೃದಯಗಳ ಕಣ್ಮಣಿಯಾಗಿರುವ ಜಯಂತ ಕಾಯ್ಕಿಣಿ ಅವರು ಕಳೆದ ನಾಲ್ಕು ವರ್ಷದಿಂದ ಗೀತಚನೆ ಕ್ಷೇತ್ರದಲ್ಲಿದ್ದು, ಈಗಾಗಲೇ ಕನ್ನಡದಲ್ಲಿ 120 ಚಿತ್ರಗೀತೆಗಳನ್ನು ರಚಿಸಿದ್ದಾರೆ. ಆ ಪೈಕಿ 100 ಹಾಡುಗಳು ಈಗಾಗಲೇ ಬಿಡುಗಡೆ ಕಂಡಿವೆ. 20 ಹಾಡುಗಳು ಇನ್ನೂ ಬಿಡುಗಡೆ ಕಾಣಬೇಕಿರುವ ಚಿತ್ರಗಳಲ್ಲಿವೆ. ಹಾಗಾಗಿ ಈ 100 ಹಾಡುಗಳ ಒಂದು ಪುಸ್ತಕ ಹೊರತರಲು ಕಾಯ್ಕಿಣಿ ಚಿಂತಿಸಿದ್ದಾರೆ. ಸತತವಾಗಿ ಎರಡು ಬಾರಿ ತಮ್ಮ ಗೀತ ರಚನೆಗೆ ಫಿಲಂಫೇರ್ ಪ್ರಶಸ್ತಿ ಪಡೆದಿರುವ ಕಾಯ್ಕಿಣಿ ಅವರ ಹೃದಯದಿಂದ ಇನ್ನೂ ಮತ್ತಷ್ಟು ಗೀತೆಗಳು ಹೊರಬರಲಿ ಎಂದು ಹಾರೈಸೋಣ.