ಕರಿಚಿರತೆ ಬಿಡುಗಡೆ ಮುಹೂರ್ತ ಕೂಡಿ ಬಂದಿದೆ. ಈ ವಾರ ಬಿಡುಗಡೆ ಆಗುವ ಈ ಚಿತ್ರದಲ್ಲಿ ವಿಜಯ್ ವಿಶಿಷ್ಟ ಗೆಟಪ್ಪಿನಲ್ಲಿ ಕಾಣಿಸಿಕೊಂಡಿದ್ದು ಇದೊಂದು ಮಹತ್ವದ ಚಿತ್ರವಾಗಿದೆ. ಇದರ ಯಶಸ್ಸಿನ ಮೇಲೆ ಅವರ ಭವಿಷ್ಯ ಆಧರಿಸಿ ನಿಂತಿದೆ.
ಇದುವರೆಗೂ ಆಕ್ಷನ್ ಮೂಲಕ ಹೆಸರಾಗಿದ್ದ ವಿಜಯ್ ಈ ಚಿತ್ರದಲ್ಲಿ ಸೆಂಟಿಮೆಂಟ್, ಲವ್ ಹಾಗೂ ಕಾಮಿಡಿಯನ್ನೂ ಬೆರೆಸಿಕೊಂಡು ನಟಿಸಿದ್ದಾರೆ. ಹಾಗಂತ ಆಕ್ಷನ್‌ಗೂ ಇಲ್ಲಿ ಕೊರತೆ ಇಲ್ಲ. ಹೀಗಾಗಿ ಸಕಲ ವೀಕ್ಷಕರ ಮನರಂಜನೆಯ ಚಿತ್ರವಾಗಿಸಿದ್ದಾರೆ.
ಎರಡು ವಿಭಿನ್ನ ಪಾತ್ರದಲ್ಲಿ ವಿಜಯ್ ಕಾಣಿಸಿಕೊಂಡಿದ್ದಾರೆ. ಪ್ರಥಮ ಅರ್ಧದಲ್ಲಿ ಇವರು ಮಾಮೂಲಿ ಪಾತ್ರದಲ್ಲಿ ಹಾಗೂ ಎರಡನೇ ಅರ್ಧದಲ್ಲಿ ಮಾನಸಿಕ ರೋಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಮಾನಸಿಕ ರೋಗಿಯಾಗಿ ನಟಿಸಲು ಸಾಕಷ್ಟು ಶ್ರಮ ವಹಿಸಿದ್ದಾರೆ. ತರಬೇತಿಯನ್ನೂ ಪಡೆದಿದ್ದಾರೆ.
ಚಿತ್ರದಲ್ಲಿ ಇಬ್ಬರು ನಾಯಕಿಯರು. ಒಬ್ಬರು ಯಜ್ಞಾ ಶೆಟ್ಟಿ ಹಾಗೂ ಮತ್ತೊಬ್ಬರು ಶರ್ಮಿಳಾ ಮಾಂಡ್ರೆ. ಯಜ್ಞಾ ಶೆಟ್ಟಿ ಅವರದ್ದು ಗ್ಲಾಮರ್ ಪಾತ್ರ. ಇದಕ್ಕೆ ತದ್ವಿರುದ್ಧ ಪಾತ್ರ ಶರ್ಮಿಳಾ ಮಾಂಡ್ರೆ ಅವರದ್ದು. ಆದರೂ ಒಂದು ಹಾಡಲ್ಲಿ ಮಾತ್ರ ಶರ್ಮಿಳಾ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ನಗೆಗೂ ಬರವಿಲ್ಲವಂತೆ. ರಂಗಾಯಣ ರಘು ಹಾಗೂ ಇತರೆ ಹಾಸ್ಯ ಕಲಾವಿದರು ಸಾಕಷ್ಟು ಮಂದಿ ಇದ್ದಾರೆ. ತುಷಾರ್ ರಂಗನಾಥ್ ಸಂಭಾಷಣೆ, ಮಾದೇಶ್ ನಿರ್ದೇಶನ, ಸಾಧು ಕೋಕಿಲಾ ಸಂಗೀತ ನೀಡಿದ್ದಾರೆ. ಕರಿ ಚಿರತೆಗೆ ಶುಭವಾಗಲಿ ಎಂದು ಹಾರೈಸೋಣ.