ಕೃಷ್ಣನ್ ಲವ್ ಸ್ಟೋರಿ ಯಶಸ್ವಿಯಾಗಿ 75 ದಿನ ಪೂರೈಸಿ, ಶತದಿನದತ್ತ ದಾಪುಗಾಲಿಡುತ್ತಿದೆ. ಚಿತ್ರದ ಈ ಸಂಭ್ರಮ ಹಂಚಿಕೊಳ್ಳಲು ಎಲ್ಲರೂ ಒಂದೆಡೆ ಸೇರಿದ್ದರು. ಚಿತ್ರದ ಒಂದು ವಿಶೇಷ ಅಂದರೆ ಈ ಚಿತ್ರದ ನಾಯಕ ನಾಯಕಿ, ನಿರ್ಮಾಪಕ, ಛಾಯಾಗ್ರಾಹಕ ಹಾಗೂ ಸಂಗೀತ ನಿರ್ದೇಶಕ ಮಾತ್ರವಲ್ಲ, ಚಿತ್ರದಲ್ಲಿ ಅಭಿನಯಿಸಿದ ಪ್ರತಿಯೊಬ್ಬ ನಟ, ನಟಿ, ತಂತ್ರಜ್ಞರೆಲ್ಲರೂ ಇಂದು ಬ್ಯುಸಿ ಆಗಿದ್ದಾರೆ. ಇವರೆಲ್ಲರಿಗೂ ಕೈತುಂಬಾ ಕೆಲಸ ಇದೆಯಂತೆ. ಕೃಷ್ಣನ ಕೀರ್ತಿ ಪ್ರತಿಯೊಬ್ಬರಿಗೂ ಸಮಾನವಾಗಿ ಹಂಚಿಕೆ ಆಗಿದೆ ಎನ್ನಲಾಗುತ್ತಿದೆ.
ಚಿತ್ರಕ್ಕಾಗಿ ನಾನು ತುಂಬಾ ಕಷ್ಟ ಪಟ್ಟಿದ್ದೆ. ನಟಿಸಿದ ಚಿತ್ರಗಳಲ್ಲಿ ಇದು ವಿಭಿನ್ನವಾಗಿ ಕಾಣಿಸಿತ್ತು. ಗೆಲುವು ಸಂತಸ ತಂದಿದೆ ಎನ್ನುತ್ತಾರೆ ನಾಯಕಿ ರಾಧಿಕಾ ಪಂಡಿತ್. ಇವರಿಗೆ ಈ ಚಿತ್ರ ನಿಜಕ್ಕೂ ಅತ್ಯಂತ ಜನಪ್ರಿಯತೆ ತಂದುಕೊಡಲಿದೆ ಎಂಬ ನಿರೀಕ್ಷೆ ಇತ್ತಂತೆ.
ನಾಯಕ ನಟ ಅಜಯ್‌ಗೂ ಈ ಚಿತ್ರ ವಿಶಿಷ್ಟ ವರ್ಚ್ಸಸು ತಂದಿದೆ. ಎಕ್ಸ್‌ಕ್ಯೂಸ್‌ಮಿ ಚಿತ್ರದ ನಂತರ ಹೇಳಿಕೊಳ್ಳುವ ಯಶಸ್ಸು ಕಾಣದಿದ್ದರೂ, ತಾಜ್‌ಮಹಲ್ ನಂತರ ಮತ್ತೊಂದು ಯಶಸ್ಸು ಅಜಯ್ ಪಾಲಿಗೆ ದಕ್ಕಿದೆ. ಚಿತ್ರವನ್ನು ಬೆಂಗಳೂರು, ಮೈಸೂರು ನಗರದವರು ಮಾತ್ರವಲ್ಲ, ಹಳ್ಳಿ ಹಳ್ಳಿಯವರೂ ನೋಡಿ ಬೆನ್ನು ತಟ್ಟುತ್ತಿದ್ದಾರೆ ಎಂದ ಮೇಲೆ ಚಿತ್ರಕ್ಕೆ ಸಿಕ್ಕ ಯಶಸ್ಸು ಅಪಾರ ಎನ್ನಬಹುದು.