ಇತ್ತೀಚೆಗೆ ಕನ್ನಡದ ಅಪಾರ ಬೇಡಿಕೆಯ ನಟಿ ಹಾಗೂ ಸುರಸುಂದರಿಯಾಗಿ ಕನ್ನಡ ಚಿತ್ರರಂಗವನ್ನು ಆಳುತ್ತಿರುವ ಕನ್ನಿಕೆ ರಾಧಿಕಾ ಪಂಡಿತ್. ಇವರ ಅಭಿನಯದ ಇನ್ನೊಂದು ಚಿತ್ರ ಶತದಿನ ಸಂಭ್ರಮದತ್ತ ಸಾಗಿದೆ.
ಹೌದು, ಇವರ ಕೃಷ್ಣನ್ ಲವ್ ಸ್ಟೋರಿ 75 ದಿನ ಪೂರೈಸಿ ಮುನ್ನುಗ್ಗುತ್ತಿದೆ. ಸತತ ಯಶಸ್ವಿ ಚಿತ್ರಗಳನ್ನು ಕಾಣುತ್ತಿರುವ ಇವರ ಅದೃಷ್ಟದಲ್ಲಿ ಸಾಗರ್ ಚಿತ್ರ ಮಂದಿರದ ಪಾಲೂ ಇದೆ. ನಗರ ಕೇಂದ್ರದಲ್ಲಿರುವ, ಕೆಂಪೇಗೌಡ ಮುಖ್ಯರಸ್ತೆಗೆ ಹೊಂದಿಕೊಂಡಂತೆಯೇ ಇರುವ ಈ ಚಿತ್ರಮಂದಿರ ಎಲ್ಲರ ಅಚ್ಚುಮೆಚ್ಚಿನ ಚಿತ್ರ ಮಂದಿರ. ನಿರಂತರ ನಾಲ್ಕು ಚಿತ್ರಗಳು ಇದೇ ಮಂದಿರದಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿದ್ದು, ರಾಧಿಕಾ ಪಂಡಿತ್ಗೂ ಸಾಗರ್ ಚಿತ್ರಮಂದಿರಕ್ಕೂ ಯಶಸ್ಸಿನ ಅವಿನಾಭಾವ ಸಂಬಂಧವಿದೆ ಎಂದರೆ ತಪ್ಪಿಲ್ಲ.
ಇವರ ಪರಿಶ್ರಮವೂ ಈ ಗೆಲುವಿನಲ್ಲಿ ಅಪಾರ ಪ್ರಮಾಣದಲ್ಲಿ ಕೆಲಸ ಮಾಡಿದೆ. ಸದ್ಯ ಇವರ ಅಭಿನಯದ ಗಾನಾ ಬಜಾನಾ ಚಿತ್ರ ತೆರೆಗೆ ಬರಲು ಸಜ್ಜಾಗಿದ್ದು ಇದೂ ಯಶಸ್ವಿಯಾದರೆ ಇವರನ್ನು ಹಿಡಿಯುವವರೇ ಇಲ್ಲ ಎಂದು ಹೇಳಲಾಗುತ್ತಿದೆ. ಇನ್ನೊಂದು ವಿಶೇಷ ಅಂದರೆ, ಈಗಾಗಲೇ ಮೊಗ್ಗಿನ ಮನಸ್ಸು, ಲವ್ ಗುರು ಹಾಗೂ ಕೃಷ್ಣನ್ ಲವ್ ಸ್ಟೋರಿ ಗೆದ್ದಾಗಿದೆ. ಒಲವೇ ಜೀವನ ಲೆಕ್ಕಾಚಾರ ಅಂಥಾ ಯಶಸ್ಸು ಕಾಣದಿದ್ದರೂ, ಅವರ ಅಭಿನಯಕ್ಕೆ ಪ್ರಶಂಸೆ ವ್ಯಕ್ತವಾಗಿತ್ತು. ಮುಂದೆ ಗಾನಾ ಬಜಾನಾವೂ ಗೆದ್ದರೆ, ರಾಧಿಕಾ ಗೆಲ್ಲುವ ಕುದುರೆ ಎನ್ನಲಡ್ಡಿಯಿಲ್ಲ.