ಸ್ಯಾಂಡಲ್‌ವುಡ್ ತುಂಬಾ ಈಗ ಎಲ್ಲಿ ನೋಡಿದರೂ ಐದು ಒಂದ್ಲ ಐದು ಸುದ್ದಿಯೇ ಕೇಳಿ ಬರುತ್ತಿದೆ. ಇದೇನಪ್ಪಾ, ಇದ್ಯಾವ ಹೊಸ ಲೆಕ್ಕಾಚಾರ ಅನ್ನಿಸಿರಬಹುದಲ್ಲಾ? ಹೌದು, ಇದು ಸ್ಯಾಂಡಲ್‌ವುಡ್‌ನಲ್ಲಿ ಸದ್ದಿಲ್ಲದೇ ಸಿದ್ಧವಾಗುತ್ತಿರುವ ಹೊಸ ಚಿತ್ರ. ತೆಲುಗು ಹಾಗೂ ಮಲಯಾಳಂ ಭಾಷೆಯ ಖ್ಯಾತ ಚಿತ್ರ ನಿರ್ದೇಶಕ ವಿ.ಕೆ. ಪ್ರಕಾಶ್ ಇದಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಕನ್ನಡದ ಬಗ್ಗೆ ಸಾಕಷ್ಟು ತಿಳಿದುಕೊಂಡಿರುವ ಇವರಿಗೆ ಈ ನಿರ್ದೇಶನ ಹೆಚ್ಚು ಕಷ್ಟವಾಗಲಿಕ್ಕಿಲ್ಲವಂತೆ. ಕಳೆದ 20 ವರ್ಷದಿಂದ ಬೆಂಗಳೂರಿನಲ್ಲಿ ನೆಲೆಸಿದ್ದೇನೆ. ಕನ್ನಡ ಚಿತ್ರರಂಗ ಹಾಗೂ ರಂಗಭೂಮಿಯ ನಂಟೂ ಸಾಕಷ್ಟಿದೆ. ಇಷ್ಟು ಕಾಲ ಕಾದಿದ್ದಕ್ಕೂ ಸಾರ್ಥಕತೆ ಸಿಕ್ಕಿದೆ. ಕನ್ನಡದಲ್ಲಿ ಒಂದು ಉತ್ತಮ ಚಿತ್ರಕಥೆ ಸಿಕ್ಕಿದೆ ಎನ್ನುತ್ತಾರೆ ಅವರು.
ಅಂದಹಾಗೆ, ನಾಲ್ಕು ನಾಟಕವನ್ನು ಒಂದು ಚಿತ್ರವಾಗಿಸುವುದು ಹೇಗೆ ಎನ್ನುವುದು ಚಿತ್ರದ ಮುಖ್ಯ ಹೈಲೈಟ್. ಚಿತ್ರದಲ್ಲಿ ನಿರ್ದೇಶಕನ ಪಾತ್ರಧಾರಿಯಾಗಿ ಮಲಯಾಳಂ ನಟ ದಿಲೀಪ್ ಅಭಿನಯಿಸುತ್ತಿದ್ದಾರೆ. ಇವರು ನಾಲ್ಕು ನಾಟಕ ಹಿಡಿದು ಚಿತ್ರ ಮಾಡಲು ಹೊರಟಾಗ ಜನ ಯಾವ್ಯಾವ ರೀತಿಯ ಸಲಹೆ ಕೊಡುತ್ತಾರೆ ಅನ್ನುವುದನ್ನು ಇಲ್ಲಿ ತೋರಿಸಲಾಗಿದೆ. ನೀವು ಚಿತ್ರ ಮಾಡುವುದಾದರೆ ಒಂದು ಐಟಂ ಸಾಂಗ್ ಬೇಕೇ ಬೇಕು, ಫೈಟ್ ನಾಲ್ಕು, ಹಾಡು ಐದು ಹಾಗೂ ರೋಚಕ ಕ್ಷಣ, ರೇಪ್ ಸೀನ್ ಎಲ್ಲವೂ ಬೇಕೇ ಬೇಕು ಎನ್ನುತ್ತಾರೆ. ಇದೆಲ್ಲಕ್ಕೂ ಆ ನಿರ್ದೇಶಕ ಸಿದ್ಧನಿದ್ದರೂ, ಹಣ ಹಾಕಲು ನಿರ್ಮಾಪಕರು ಬರುವುದೇ ಇಲ್ಲ. ಪೀಕಲಾಟಕ್ಕೆ ಬಿದ್ದ ನಿರ್ದೇಶಕ ಸ್ವಂತ ನಿರ್ಮಾಪಕನಾಗಲು ಮುಂದಾಗುತ್ತಾನೆ. ಇದೇ ಚಿತ್ರದ ಕಥೆ.
ಚಿತ್ರದಲ್ಲಿ ಪದ್ಮಪ್ರಿಯಾ, ಶ್ರುತಿ, ಹರೀಶ್ ರಾಜ್, ದೇವರಾಜ್, ಸಿ.ಆರ್.ಸಿಂಹ ಮತ್ತಿತರರು ಇದ್ದಾರೆ. ಕೆ.ಯು. ಮೋಹನನ್ ಸೇರಿದಂತೆ ಐವರು ಛಾಯಾಗ್ರಾಹಕರು ಇದ್ದಾರೆ. ವಿಜಯ್ ಪ್ರಕಾಶ್ ಸೇರಿದಂತೆ ಐವರು ಸಂಗೀತ ನಿರ್ದೇಶಕರು ಈ ಚಿತ್ರಕ್ಕೆ ಇದ್ದಾರೆ.