ಜಯಹೇ ಚಿತ್ರ ಕುಂಟುತ್ತಾ ಏಳುತ್ತಾ ಅದ್ಹೇಗೋ ಒಂದೆರಡು ಕಡೆ 50 ದಿನ ಪೂರೈಸಿದೆ ಎಂಬ ಸುದ್ದಿ ಕೇಳಿ ಬರುತ್ತಿದೆಯಾದರೂ, ಹೇಳಿಕೊಳ್ಳುವಂಥ ಯಶಸ್ಸು ಅದಕ್ಕೆ ದಕ್ಕಿಲ್ಲ. ಆದರೆ ಅದೇ ತಂಡ ಇನ್ನೊಂದು ಚಿತ್ರ ಮಾಡುತ್ತಿರುವುದಂತೂ ಸುಳ್ಳಲ್ಲ. ಈ ಹಿಂದೆ ನೀಡಿದ್ದ ಮಾತಿನಂತೆ ಥ್ರಿಲ್ಲರ್ ಹೊಸ ಚಿತ್ರ 'ಬ್ಯಾಟಿಂಗ್' ಆರಂಭಿಸಿದ್ದಾರೆ.
ಹೌದು. ಜಯಹೇ ಚಿತ್ರ ತಂಡವನ್ನೇ ಉಳಿಸಿಕೊಂಡು ಸಿದ್ಧಪಡಿಸುತ್ತಿರುವ ಚಿತ್ರ ಇದಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಚಿತ್ರ ಸೆಟ್ಟೇರಲಿದೆ. ಆ ಮೂಲಕ ಮತ್ತೊಂದು ಆಕ್ಷನ್ ಚಿತ್ರ ಚಿತ್ರರಸಿಕರಿಗೆ ಸಿಗುತ್ತಿದೆ ಎನ್ನುವಲ್ಲಿ ಯಾವುದೇ ಸಂಶಯ ಉಳಿದಿಲ್ಲ. ಚಿತ್ರವನ್ನು ಥ್ರಿಲ್ಲರ್ ಗುರುರಾಯ ಫಿಲಂ ಮೇಕರ್ಸ್ ಸಹಾಯದಿಂದ ಹೊರ ತರುತ್ತಿದ್ದಾರೆ.
ಚಿತ್ರದ ನಾಯಕಿ ಆಯೇಷಾ ಆಗಿದ್ದು, ನಾಯಕರಾಗಿ ತ್ರಿಶೂಲ್ ಓಂಕಾರ್ ಎಂಬ ಹೊಸ ಹುಡುಗ ಆಯ್ಕೆಯಾಗಿದ್ದಾರೆ. ಕೃಪಾಕರ್ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ. ಕಥೆ, ಚಿತ್ರಕಥೆ, ಸಾಹಸ, ಸಂಭಾಷಣೆ, ಸಾಹತ್ಯ ಎಲ್ಲವೂ ಥ್ರಿಲ್ಲರ್ ಮಂಜು ಅವರೊಬ್ಬರೇ ನಿಭಾಯಿಸಲಿದ್ದಾರೆ. ಒಟ್ಟಾರೆ ಗುರುಮೂರ್ತಿ ಅವರ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಈ ಚಿತ್ರ ಜಯಹೇ ಮಾದರಿಯಲ್ಲೇ ಇರದಿದ್ದರೆ ಸಾಕು ಎನ್ನುತ್ತಿದ್ದಾರೆ ಅಭಿಮಾನಿಗಳು.
ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಟಾರ್ಚರ್ ನೀಡುವ ಚಿತ್ರಗಳು ಹೆಚ್ಚಾಗುತ್ತಿದ್ದು, ಇದರಿಂದ ಮುಕ್ತಿ ಪಡೆಯ ಬಯಸುವ ನಾಗರಿಕರಿಗೆ ಇದೊಂದು ಸಹೃದಯ ಚಿತ್ರವಾಗಿ ಲಭಿಸಲಿ ಅನ್ನುವುದೇ ಆಶಯ.