ನಟ ಕಿಚ್ಚ ಸುದೀಪ್ ಸೆಪ್ಟೆಂಬರ್ 2ಕ್ಕೆ ಸರಿಯಾಗಿ 37 ವರ್ಷಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬದ ಸಂದರ್ಭ ಅವರ ಜೆಪಿನಗರದ ಮನೆ ಮುಂದೆ ನೂರಾರು ಅಭಿಮಾನಿಗಳು ತಮ್ಮ ಮೆಚ್ಚಿನ ನಟನಿಗೆ ಶುಭ ಹಾರೈಸಿದರು. ಕಿಚ್ಚ ಸುದೀಪ್‌ಗೆ ಜೈ ಅಂತ ಘೋಷಣೆ ಕೂಗುತ್ತಾ ಸುದೀಪ್ ಮನೆ ಮುಂದೆ ವಾಹನ ಸಾಗಲೂ ಆಸ್ಪದವೇ ನೀಡದೆ ಗುಂಪುಗುಂಪಾಗಿ ನೆರೆದಿದ್ದರು.
ಸುನಿಲ್ ಕುಮಾರ್ ದೇಸಾಯಿಯವರ ಪ್ರತ್ಯರ್ಥ ಸಿನಿಮಾದಲ್ಲಿ ಪೋಷಕ ನಟನಾಗಿ ನಟಿಸಿದ ಸುದೀಪ್ ನಂತರ ದೇಸಾಯಿಯವರ ಸ್ಪರ್ಷ ಚಿತ್ರದ ಮೂಲಕ ಭಡ್ತಿ ಪಡೆದರು. ಹುಚ್ಚ, ರಂಗ ಎಸ್ಎಸ್ಎಲ್‌ಸಿ, ವಾಲಿ, ಸ್ವಾತಿ ಮುತ್ತು, ಚಂದು, ನಂದಿ, ನಲ್ಲ, ಮೈ ಆಟೋಗ್ರಾಫ್, ನಂ 73 ಶಾಂತಿನಿವಾಸ, ಮಾತಾಡ್ ಮಾತಾಡ್ ಮಲ್ಲಿಗೆ, ಗೂಳಿ, ಚಂದು, ದಮ್, ಪಾರ್ಥ, ಹುಬ್ಬಳ್ಳಿ, ಮಹಾರಾಜ, ಕಾಶಿ ಫ್ರಂ ವಿಲೇಜ್, ಸೈ, ಕಿಚ್ಚ, ತಿರುಪತಿ, ಕಾಮಣ್ಣನ ಮಕ್ಕಳು, ವೀರ ಮದಕರಿ, ಮಿ.ತೀರ್ಥ, ಮುಸ್ಸಂಜೆ ಮಾತು, ಜಸ್ಟ್ ಮಾತ್ ಮಾತಲ್ಲಿ ಮತ್ತಿತರ ಹಲವಾರು ಚಿತ್ರಗಳಲ್ಲಿ ಸುದೀಪ್ ನಟಿಸಿ ಮನೆಮಾತಾಗಿದ್ದಾರೆ.
ಕನ್ನಡದ ಪ್ರಬುದ್ಧ ನಟರಲ್ಲಿ ಒಬ್ಬರು ಎಂಬ ಹೆಗ್ಗಳಿಕೆಯೂ ಇವರಿಗಿದೆ. ಬಾಲಿವುಡ್ಡಿಗೂ ಹೋಗಿ ಫೂಂಕ್, ಫೂಂಕ್ 2, ರಣ್ ಚಿತ್ರಗಳಲ್ಲಿ ನಟಿಸಿ ಅಮಿತಾಬ್ ಬಚ್ಚನ್ ಕೈಯಲ್ಲೂ ಶಹಬ್ಬಾಸ್ ಅನಿಸಿಕೊಂಡು ಮತ್ತೆ ಕನ್ನಡ ಕುವರನಾಗಿಯೇ ಕಾಯಕ ಮುಂದುವರಿಸಿರುವ ಸುದೀಪ್ ಕೈಯಲ್ಲಿ ಇನ್ನೂ ಎರಡು ಬಾಲಿವುಡ್ ಚಿತ್ರಗಳಿವೆ.
ಕನ್ನಡದಲ್ಲೂ ಸಾಕಷ್ಟು ಬ್ಯುಸಿಯಾಗಿರುವ ಸುದೀಪ್ ಸದ್ಯ ವೀರ ಪರಂಪರೆ, ದ್ವಾರಕೀಶ್ ಜೊತೆಗಿನ ಇನ್ನೂ ಹೆಸರಿಡದ ಚಿತ್ರ (ವಿಷ್ಣುವರ್ಧನ ಹೆಸರಿಟ್ಟು ವಿವಾದ ಸೃಷ್ಟಿಸಿದ ಚಿತ್ರ), ಕೆಂಪೇಗೌಡ ಮತ್ತಿತರ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.
ನಿರ್ದೇಶನದಲ್ಲೂ ಹೆಸರು ಪಡೆದಿರುವ ಸುದೀಪ್, ಮೈ ಆಟೋಗ್ರಾಫ್, ನಂ 73 ಶಾಂತಿನಿವಾಸ, ಸ್ವಾತಿ ಮುತ್ತು, ವೀರ ಮದಕರಿ, ಜಸ್ಟ್ ಮಾತ್ ಮಾತಲ್ಲಿ ಚಿತ್ರಗಳ ಮೂಲಕ ಹೆಸರು ಪಡೆದಿದ್ದಾರೆ. ಇವುಗಳಲ್ಲಿ ಬಹುತೇಕವು ರಿಮೇಕ್ ಚಿತ್ರಗಳಾದರೂ, ಸುದೀಪ್ ರಿಮೇಕ್ ಚಿತ್ರಗಳನ್ನೂ ಹೇಗೆ ಗೆಲ್ಲಿಸಬಹುದು ಎಂಬುದಕ್ಕೆ ಸಾಕ್ಷಿಯಾದವರು. ಹುಚ್ಚ, ನಂದಿ ಹಾಗೂ ಸ್ವಾತಿ ಮುತ್ತು ಚಿತ್ರಗಳ ಮನೋಜ್ಞ ನಟನೆಗೆ ಮೂರು ಬಾರಿ ಸತತವಾಗಿ ಹ್ಯಾಟ್ರಿಕ್ ಫಿಲಂಫೇರ್ ಅತ್ಯುತ್ತಮ ನಟ ಪ್ರಶಸ್ತಿ ಗೆದ್ದುಕೊಂಡವರು.
ಸದ್ಯ ಕನ್ವರ್‌ಲಾಲ್ ಚಿತ್ರದ ನಿರ್ದೇಶನವನ್ನೂ ಕೈಗೆತ್ತಿಕೊಂಡಿರುವ ಸುದೀಪ್ ಅವರ ಕಿಚ್ಚ ಹುಚ್ಚ ಚಿತ್ರ ಇನ್ನೇನು ತೆರೆ ಕಾಣಲಿದೆ. ಹಿಂದಿ ಚಿತ್ರವೊಂದನ್ನೂ ನಿರ್ದೇಶಿಸುವ ಕನಸನ್ನೂ ಹೊತ್ತಿದ್ದಾರೆ. ಕೈತುಂಬ ಚಿತ್ರಗಳು, ತಲೆ ತುಂಬ ಸಿನಿಮಾ ಯೋಚನೆ ಹೊತ್ತುಕೊಂಡು ಸುದೀಪ್ ಕನ್ನಡ ಚಿತ್ರರಂಗಕ್ಕೆ ಹೆಸರು ತಂದುಕೊಟ್ಟವರು ಸುದೀಪ್.
ಇಂಥ ಒಬ್ಬ ಉತ್ತಮ ನಟ, ನಿರ್ದೇಶಕ, ಪ್ರತಿಭಾವಂತ ಸುದೀಪ್ ಅವರಿಗೆ ಶುಭವಾಗಲಿ. ಕೊಂಚ ರಿಮೇಕ್ ಹುಚ್ಚು ಬಿಟ್ಟು ಸ್ವಮೇಕ್ ಚಿತ್ರಗಳತ್ತ ಗಮನ ಹರಿಸಿ ತಮ್ಮ ಪ್ರತಿಭೆಯನ್ನು ಬೆಳಗಲಿ. ದೇವರು ಅವರಿಗೆ ಆ ಬುದ್ಧಿ ನೀಡಲಿ ಎಂದೇ ಈ ಹುಟ್ಟುಹಬ್ಬದ ಸಂದರ್ಭ ಹಾರೈಸೋಣ.