ಹಿಂದಿಯ ರೋಡ್ ಚಿತ್ರ ಕನ್ನಡಕ್ಕೆ ರಿಮೇಕ್ ಆಗುತ್ತಿದ್ದು ಅದಕ್ಕೆ ಕನ್ನಡದಲ್ಲಿ ಜರ್ನಿ ಎಂದು ಇಡಲಾಗಿದೆ. ಆದರೆ ನಿರ್ದೇಶಕರೇ ಹೇಳುವಂತೆ ಇದು ರಿಮೇಕ್ ಅಲ್ಲ. ಕೇವಲ ರೋಡ್‌ನಿಂದ ಸ್ಪೂರ್ತಿ ಪಡೆಯಲಾಗಿದೆ ಅಷ್ಟೆ!
ಅದೇನೇ ಇರಲಿ. ಹೆಸರಿಗೂ ಚಿತ್ರಕ್ಕೂ ಏನೂ ಸಂಬಂಧ ಇಲ್ಲವಂತೆ. ರಸ್ತೆ ಬೇರೆ ಚಿತ್ರ ಬೇರೆ ಅನ್ನುವ ರೀತಿ ಇದು ಇದೆ ಎನ್ನುತ್ತಾರೆ ನಿರ್ದೇಶಕ ಬಿ.ಎಸ್. ಸಂಜಯ್. ಚಿತ್ರಕ್ಕೆ ರೋಡ್ ಕಾನ್ಸೆಪ್ಟ್ ಮಾತ್ರ ಇದ್ದು, ಬಹುತೇಕ ಚಿತ್ರ ಹೆಸರಿಗೆ ಭಿನ್ನವಾಗಿ ಇದೆಯಂತೆ.
ಮೆಂಟಲ್ ಸ್ಟಾರ್ ಅರ್ಜುನ್ ಹಾಗೂ ಭರತ್ ಕಲ್ಯಾಣ್ ಚಿತ್ರದಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ. ಭರತ್ ಅವರದ್ದು ಪೊಲೀಸ್ ಪಾತ್ರವಾದರೂ ಚಿತ್ರದಲ್ಲಿ ಇವರ ರೊಮ್ಯಾನ್ಸ್‌ಗೇನೂ ಕಡಿಮೆ ಇಲ್ಲವಂತೆ. ಮೆಂಟಲ್ ಸ್ಟಾರ್ ಅರ್ಜುನ್‌ದು ನೆಗೆಟಿವ್ ಪಾತ್ರ. ಶಾಂತಿಪ್ರಿಯಾ ನಟಿ. ಇವರಿಗೆ ಇದು ಚೊಚ್ಚಲು ಚಿತ್ರ. ಇಬ್ಬರೂ ಹೀರೋ ಜತೆ ರೊಮ್ಯಾಂಟಿಕ್ ಆಗಿ ಅಭಿನಯಿಸಿದ್ದೇನೆ ಎನ್ನುತ್ತಾರೆ.
ಆದರೆ ಅರ್ಜುನ್ ಇದನ್ನು ಒಪ್ಪಲು ಸಿದ್ಧರಿಲ್ಲ. ಅವರು ಹೇಳುವ ಪ್ರಕಾರ ಇದು ಮಾಸ್ ಹಾಗೂ ಸಸ್ಪೆನ್ಸ್ ಇರುವ ಚಿತ್ರ. ಇಲ್ಲಿ ಪ್ರೀತಿ ಗೀತಿ ಏನೂ ಇಲ್ಲ ಎನ್ನುತ್ತಾರೆ. ಚಿತ್ರಕ್ಕೆ ಸಂಜೀವ್ ಅವರ ಸಂಗೀತ ಇದೆ. ಹಳೆ ರಸ್ತೆಯಲ್ಲಿ ಹೊಸ ಜರ್ನಿ ಎಂಬಂತಿದೆ ಈ ಚಿತ್ರದ ಕಥೆ. ಜನ ಈ ಜರ್ನಿಯನ್ನು ಎಷ್ಟು ನೆಚ್ಚಿಕೊಳ್ಳುತ್ತಾರೆ ಅನ್ನುವುದನ್ನು ಕಾಲವೇ ಹೇಳಬೇಕು.