ಕನ್ನಡ ಚಿತ್ರರಂಗಕ್ಕೆ 'ಮೃತ್ಯು': ಬೆಳಿಗ್ಗೆ 10ರಿಂದ ಸಂಜೆ 5.30!
ಕನ್ನಡ ಚಿತ್ರರಂಗದಲ್ಲಿ ಶೀಘ್ರವೇ ಮ್ಯತ್ಯುವಿನ ಆಗಮನ ಆಗಲಿದೆ. ಈಗಾಗಲೇ ಸಾಕಷ್ಟು ಚಿತ್ರಗಳು ತೆರೆಗೆ ಬಂದು, ಇನ್ನೂ ಕೆಲವು ಬರದೇ ಮೃತ್ಯುವಶವಾಗುತ್ತಿರುವ ಈ ಸಂದರ್ಭದಲ್ಲಿ ಇದೇನು ಹೊಸ ಸುದ್ದಿ ಅಂದುಕೊಂಡಿರಾ? ಹೌದು ಇದೀಗ ಈ ಹೆಸರಿನ ಚಿತ್ರ ತೆರೆಗೆ ಬರುತ್ತಿದೆ. ಸದ್ಯ ಈ ತಿಂಗಳ 6ರಂದು ಚಿತ್ರ ಸೆಟ್ಟೇರಲಿದ್ದು, ಇದೇ ವರ್ಷದ ಕೊನೆಯ ಒಳಗೆ ಚಿತ್ರ ತೆರೆಗೂ ಬರಲಿದೆ ಎನ್ನಲಾಗುತ್ತಿದೆ.
ಸಾವಿನ ವಿವಿಧ ವ್ಯಾಖ್ಯಾನ ಮಾಡುವುದು ಈ ಚಿತ್ರದ ಮೂಲ ಕಥಾ ಹಂದರ. ಸಾವು ಅಂದರೆ ಎಲ್ಲರೂ ಹೆದರುವುದು ಸಹಜ. ಅದನ್ನೇ ಚಿತ್ರದಲ್ಲೂ ತೋರಿಸುವ ಯತ್ನ ಮಾಡಲಾಗಿದೆ. ಭ್ರಷ್ಟಾಚಾರಕ್ಕೆ ಕಡಿವಾಣವನ್ನು ಸಾವಿನ ಮೂಲಕ ಹಾಕುವುದನ್ನು ತೋರಿಸುವ ವಿಶಿಷ್ಟ ಪ್ರಯತ್ನ ಇಲ್ಲಾಗಿದೆ. ಇದು ಹಾರರ್ ಚಿತ್ರ ಅಲ್ಲ. ಆದರೆ ಸಸ್ಪೆನ್ಸ್ ಓರಿಯಂಟೆಡ್ ಚಿತ್ರ. ನೈಜತೆಗೆ ಹೆಚ್ಚು ಒತ್ತು ಕೊಡಲಾಗಿದೆಯಂತೆ.
ಹಾಡುಗಳು ಈ ಚಿತ್ರದಲ್ಲಿ ಇಲ್ಲ. ಡೆಲ್ಲಿ ಹುಡುಗಿ ಶಿಲ್ಪಾ ಚಿತ್ರದ ನಾಯಕಿ. ಒಂದು ಸಿಂಪಲ್ ಹುಡುಗಿಯಾಗಿ ಕಾಣಿಸಿದ್ದಾರೆ. ಇದು ಎಲ್ಲಾ ಚಿತ್ರಗಳ ಮಾದರಿಯಲ್ಲಿ ಬರುತ್ತಿಲ್ಲವಂತೆ. ಪ್ರತಿ ಪೋಸ್ಟರ್‌ಗಳು ಸಹ ಚಿತ್ರದಷ್ಟೇ ವಿಭಿನ್ನವಾಗಿರಲಿವೆಯಂತೆ. ಅಲ್ಲಿಯೂ ಹೊಸತನ ಮೆರೆಯುವ ಆಶಯ ಚಿತ್ರತಂಡದ್ದು. ಬೆಳಗ್ಗೆ 10ರಿಂದ ಸಂಜೆ 5.30ರ ನಡುವೆ ಏನೆಲ್ಲಾ ಸಂಭವಿಸಬಹುದು ಎನ್ನುವುದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಇದೊಂದು ಹೊಸಬರ ಹೊಸಚಿತ್ರವಾಗಿರುವುದು ಇನ್ನೊಂದು ವಿಶೇಷ.