ಚೆಂದದ ಮೊಗದ ಅಂದನೆಯ ಕನ್ನಡ ಕುವರ ನಟ ಚೇತನ್ ಅಭಿನಯದಲ್ಲಿ ಮಾತ್ರವಲ್ಲ ರ‌್ಯಾಂಪ್ ಮೇಲೆ ಬಂದರೂ ಅಷ್ಟೇ ಉತ್ತಮ ಕಲಾವಿದ ಎನ್ನುವುದನ್ನು ಸಾಬೀತು ಪಡಿಸಿದ್ದಾರೆ. ನಗರದಲ್ಲಿ ಇಂಡಿಗೋ ನೇಷನ್ ಸಂಸ್ಥೆ ಆಯೋಜಿಸಿದ್ದ ಸಮಾರಂಭದಲ್ಲಿ ಇವರು ರ‌್ಯಾಂಪ್ ಮೇಲೆ ಬೆಕ್ಕಿನ ನಡಿಗೆ ನಡೆದರು.
ಪುರುಷರ ಉಡುಪು ಬಿಡುಗಡೆ ಮಾಡಲು ಇಂಡಿಗೋ ನೇಷನ್ ಕೇಂದ್ರ ಕಚೇರಿಯಲ್ಲಿ ನಡೆದ ಉಡುಪು ಪ್ರದರ್ಶನದಲ್ಲಿ ಪಾಲ್ಗೊಂಡು ಗಮನ ಸೆಳೆದರು. ಸ್ಟೈಲಿಶ್ ಲುಕ್, ಮನಮೋಹಕ ನಡಿಗೆಯಿಂದ ಎಲ್ಲರ ಚಪ್ಪಾಳೆ ಗಿಟ್ಟಿಸಿದರು.
ಇವರ ಪಾಲಿಗೆ ಮಾಡೆಲಿಂಗ್ ಹೊಸದು. ಮಾಡೆಲಿಂಗ್ ಇವರ ಅನುಭವದಲ್ಲಿರುವ ವಿದ್ಯೆಯಲ್ಲ. ಆದರೂ ಒಬ್ಬ ಹೊಸಬನಂತೆ ರ‌್ಯಾಂಪ್ ಮೇಲೆ ನಡೆಯದೇ, ನುರಿತ ಫ್ಯಾಷನ್ ಪಟುವಂತೆ ನಡೆದಾಡಿದರು. ಸೂರ್ಯಕಾಂತಿ ಚಿತ್ರ ಬಾಕ್ಸ್ ಆಫೀಸಿನಲ್ಲಿ ನೆಲ ಕಚ್ಚಿದ ಮೇಲೆ ಇವರು ಹೊಸ ಕನಸುಗಳನ್ನು ಕಾಣುತ್ತಿದ್ದಾರೆ. ಆ ಮೂಲಕ ಚಿತ್ರಕಥೆಯನ್ನೂ ಬರೆಯಲು ಹೊರಟಿದ್ದು, ಸದ್ಯ ಮರೆಯಲಾರೆ ಚಿತ್ರ ಒಪ್ಪಿಕೊಂಡಿದ್ದಾರೆ.
ತೆಲುಗಿನಲ್ಲೂ ಇವರು ನಟಿಸುತ್ತಿದ್ದು, ಉತ್ತಮ ಚಿತ್ರವನ್ನು ಅಲ್ಲಿಯೂ ಆಯ್ಕೆಮಾಡಿಕೊಂಡಿದ್ದಾರಂತೆ. ಆ ಚಿತ್ರ ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರೀಕರಣವಾಗಲಿದೆ. ಅಲ್ಲೂ ಕನ್ನಡದ ಪ್ರತಿಭೆ ಮೆರೆಯುವ ಹಂಬಲ ಈ ಕನಸು ಕಂಗಳ ಹುಡುಗನದ್ದು. ಚೇತನ್ಗೆ ಶುಭವಾಗಲಿ.