ಕನ್ನಡ ಕುವರ ಸೂಪರ್ ಸ್ಟಾರ್ ರಜನೀಕಾಂತ್ ಅವರ ದ್ವಿತೀಯ ಪುತ್ರಿ ಸೌಂದರ್ಯಾ ರಜನೀಕಾಂತ್ ಅವರ ವಿವಾಹ ಅದ್ದೂರಿಯಾಗಿ ಇಂದು (ಸೆ.3) ಚೆನ್ನೈನ ರಾಣಿ ಮೆಯ್ಯಮ್ಮಾಯಿ ಕಲ್ಯಾಣ ಭವನದಲ್ಲಿ ನೆರವೇರಿತು. ಕೇಂದ್ರ ಸಚಿವ ಪಿ.ಚಿದಂಬರಂ, ಜಯಲಲಿತಾ ಸೇರಿದಂತೆ ಖ್ಯಾತ ರಾಜಕಾರಣಿಗಳು, ಚಿತ್ರೋದ್ಯಮಿಗಳು, ನಟ ನಟಿಯರು ಈ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡರು.
ತಮಿಳುನಾಡಿದ ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ ರಾಮ್ ಕುಮಾರ್ ಅವರ ಪುತ್ರ ಅಶ್ವಿನ್ ಕುಮಾರ್ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸೌಂದರ್ಯಾ ತಮ್ಮ ಅಪ್ಪಟ ಕಾಂಚೀವರಂ ಸೀರೆಯಲ್ಲಿ ಝಗಮಗಿಸುತ್ತಿದ್ದರು. ಹೆಸರಿಗೆ ತಕ್ಕಂತೆ ಅಶ್ವಿನ್ ಕುಮಾರ್ ಅಶ್ವಿನೀ ಕುಮಾರನಂತೆಯೇ ಕಂಗೊಳಿಸಿದ್ದರು. ಸೌಂದರ್ಯಾ ಕೂಡಾ ಹೆಸರಿಗೆ ತಕ್ಕಂತೆ ಅಪ್ಪಟ ಸೌಂದರ್ಯದ ಖನಿಯಂತೆ ಮೇಳೈಸಿದರು. ವೈಭವದಲ್ಲಿ ದೇವಲೋಕವನ್ನೂ ನಾಚಿಸುವಂತಿತ್ತು ಈ ಸಮಾರಂಭ. ಆರಂಭದಲ್ಲಿ ಹಸಿರು ಬಣ್ಣದ ಜರತಾರಿಯುಟ್ಟು ಕಂಗೊಳಿಸಿದ ಸೌಂದರ್ಯಾ ನಂತರ ಅಚ್ಚ ಕೆಂಪಿನ ಸೀರೆಯನ್ನು ಉಟ್ಟು ಮದುವೆಯ ವಿಧಿ ವಿಧಾನಗಳಲ್ಲಿ ಪಾಲ್ಗೊಂಡರು.
ಬೆಳ್ಳಂಬೆಳಿಗ್ಗೆ 7.30ಕ್ಕೇ ಮದುವೆಯ ವಿಧಿಗಳು ಆರಂಭವಾಗಿದ್ದವು. ಹಾಗಾಗಿ ಬೆಳಗ್ಗೆಯೇ ಖ್ಯಾತನಾಮರು ವಿವಾಹ ಸಮಾರಂಭಕ್ಕೆ ಹಾಜರಾಗಿ ವಧೂವರರನ್ನು ಹರಸಿದರು. ತಮಿಳು ಬ್ರಾಹ್ಮಣ ಸಂಪ್ರದಾಯದಂತೆ ನಡೆದ ಮದುವೆ ಸಮಾರಂಭದಲ್ಲಿ ಅಲ್ಲಲ್ಲಿ ಮರಾಠಿ ಸಂಪ್ರದಾಯದ ಛಾಯೆಯೂ ಎದ್ದು ಕಾಣುತ್ತಿತ್ತು.
ಬಾಲಿವುಡ್ಡಿನ ಸೌಂದರ್ಯ ರಾಣಿ ಐಶ್ವರ್ಯಾ ರೈ, ಅಭಿಷೇಕ್ ಬಚ್ಚನ್, ನಿರ್ದೇಶಕ ಮಣಿರತ್ನಂ, ನಟಿ ಸುಹಾಸಿನಿ ಮಣಿರತ್ನಂ, ನಟ ಕಮಲ್ ಹಾಸನ್, ಮೆಗಾ ಸ್ಟಾರ್ ಚಿರಂಜೀವಿ, ಕೇಂದ್ರ ಸಚಿವ ಪಿ.ಚಿದಂಬರಂ, ಸಚಿವ ಅಳಗಿರಿ, ನಟಿ ಶ್ರೀದೇವಿ, ಬೋನಿ ಕಪೂರ್, ನಿರ್ದೇಶಕ ಕೆ. ಬಾಲಚಂದರ್, ಸಾಹಿತಿ ವೈರಮುತ್ತು, ಮಾಜಿ ಸಚಿವ ಆರ್.ಎಂ.ವೀರಪ್ಪನ್, ಗಾಯಕಿ ಪಿ.ಸುಶೀಲ ಸೇರಿದಂತೆ ಖ್ಯಾತನಾಮರ ದಂಡೇ ಮದುವೆಯಲ್ಲಿ ಹಾಜರಿತ್ತು. ಇವರೆಲ್ಲರ ಜೊತೆಗೆ ನಮ್ಮ ಕರ್ನಾಟಕದಿಂದ ಅಂಬರೀಷ್ ಸುಮಲತಾ ದಂಪತಿಗಳೂ ಮದುವೆಯಲ್ಲಿ ಭಾಗವಹಿಸಿ ವಧೂವರರಿಗೆ ಶುಭ ಹಾರೈಸಿದರು.
ಊಟಕ್ಕೆ ಕರ್ನಾಟಕದ ಹೋಳಿಗೆ!: ಬೆಳಗ್ಗಿನ ಉಪಹಾರಕ್ಕೆ ಸುಮಾರು 3000ಕ್ಕೂ ಹೆಚ್ಚು ಮಂದಿ ಹಾಜರಾದರೆ, ಮಧ್ಯಾಹ್ನದ ಭೋಜನವನ್ನು 5000ಕ್ಕೂ ಹೆಚ್ಚು ಮಂದಿ ಸವಿದರು. ಕರ್ನಾಟಕ ಹಾಗೂ ತಮಿಳುನಾಡಿದ ಸಾಂಪ್ರದಾಯಿಕ ತಿನಿಸುಗಳು ಸಮಾರಂಭದ ಪುಷ್ಕಳ ಭೋಜನವನ್ನು ಮತ್ತಷ್ಟೂ ಸಿಹಿಯಾಗಿಸಿದವೆಂದರೆ ತಪ್ಪಲ್ಲ. ಕರ್ನಾಟಕದ ಸ್ಪೆಷಲ್ ಹೋಳಿಗೆ ಮಧ್ಯಾಹ್ನದ ಭೋಜನದಲ್ಲಿದ್ದುದು ವಿಶೇಷ.
ಸೌಂದರ್ಯಾ ರಜನೀಕಾಂತ್ ಈಗಾಗಲೇ ಒಂದೆರಡು ಚಿತ್ರಗಳನ್ನು ನಿರ್ಮಿಸಿದ್ದು, ತಮಿಳು ಚಿತ್ರರಂಗದಲ್ಲಿ ನಿರ್ಮಾಪಕಿಯಾಗಿ ತಳವೂರುತ್ತಿದ್ದಾರೆ. ನಿರ್ದೇಶನಕ್ಕೂ ಮನಸ್ಸು ಮಾಡುತ್ತಿರುವ ಸೌಂದರ್ಯಾ ಅಪ್ಪ ರಜನೀಕಾಂತ್ ಅವರ ಸುಲ್ತಾನ್ ದಿ ವಾರಿಯರ್ ಎಂಬ ಆನಿಮೇಷನ್ ಚಿತ್ರವನ್ನು ತಯಾರಿಸುತ್ತಿದ್ದಾರೆ. ಆನಿಮೇಷನ್ ತಂತ್ರಜ್ಞಾನದಲ್ಲಿ ಪದವೀಧರೆಯಾಗಿರುವ ಸೌಂದರ್ಯಾ ಈಗಾಗಲೇ ಸಾಕಷ್ಟು ಹೆಸರು ಪಡೆದಿದ್ದಾರೆ. ಅಶ್ವಿನ್ ಕುಮಾರ್ ಸ್ಟ್ಯಾನ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಸದ್ಯ ತಮ್ಮ ತಂದೆಯ ಉದ್ಯಮದ ಉಸ್ತುವಾರಿ ಹೊತ್ತಿದ್ದಾರೆ.