ಅರ್ಜುನ್ ಕೊನೆಗೂ ಅದ್ದೂರಿಯಾಗಿ 'ಅದ್ದೂರಿ' ಚಿತ್ರ ಆರಂಭಿಸಿದ್ದಾರೆ. ಬಹು ದಿನಗಳ ಡಾ. ರಾಜ್ ಬ್ಯಾನರ್ ಅಡಿ ಚಿತ್ರ ಮಾಡುವ ಆಶಯವನ್ನು ಬದಿಗಿಟ್ಟು ಅಥವಾ ಮುಂದೂಡಿ ಅದ್ದೂರಿಯನ್ನು ಕೈಗೆತ್ತಿಕೊಂಡಿದ್ದಾರೆ.
ಪಾರ್ವತಮ್ಮ ರಾಜ್‌ಕುಮಾರ್ ಅವರ ಹೋಂ ಬ್ಯಾನರ್ ವಜ್ರೇಶ್ವರಿ ಕಂಬೈನ್ಸ್ ಮೂಲಕವೇ ಚಿತ್ರ ಹೊರತರಬೇಕು ಎಂದು ಶತಾಯಗತಾಯ ಯತ್ನಿಸಿದ್ದ ಅರ್ಜುನ್, ಅವರಿಂದ ಪ್ರತಿಕ್ರಿಯೆ ಸಿಗದ ಕಾರಣ ಪ್ರಾಜೆಕ್ಟ್ ಮುಂದೂಡಿದ್ದಾರೆ ಅಥವಾ ಕೈಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
'ಅದ್ದೂರಿ' ಚಿತ್ರ ಅಪ್ಪಟ ಸ್ವಮೇಕಂತೆ. ಅಲ್ಲದೇ ಇದೊಂದು ಸಿಂಪಲ್ ಲವ್ ಸ್ಟೋರಿ ಎಂದರೂ ಅಡ್ಡಿಯಿಲ್ಲ. ಆದರೆ, ಚಿತ್ರದಲ್ಲಿ ತೋರಿಸುವ ಆಯಾಮಗಳು ವಿಶೇಷತೆಯಿಂದ ಕೂಡಿರುತ್ತವೆ ಎನ್ನುವ ಅರ್ಜುನ್, ಈ ಬಾರಿ ಮತ್ತೆ ಗೆಲ್ಲಬೇಕು ಎಂದು ಹೊರಟಿದ್ದಾರೆ. ಇದು ಅವರ ಎರಡನೇ ಚಿತ್ರ.
ಧ್ರುವ ಸರ್ಜಾ ಈ ಅದ್ದೂರಿ ಚಿತ್ರದ ನಾಯಕ. ಇನ್ನೂ ಇಪ್ಪತ್ತೊಂದರ ಹರೆಯದ ಈತ, ಸಿನಿಮಾ ಬಗ್ಗೆ ವಿಶೇಷ ಕಾಳಜಿ ಹೊಂದಿರುವುದು ಆಡುವ ಅಭಿಮಾನದ ಮಾತಿನಿಂದಲೇ ವ್ಯಕ್ತವಾಗುತ್ತದೆ!
ಸಿನಿಮಾಗಾಗಿ ಸಾಕಷ್ಟು ಕಲಿತಿದ್ದೇನೆ. ನಟನೆಯಲ್ಲೂ ತರಬೇತಿ ಪಡೆದಿದ್ದೇನೆ. ಜನ ನನ್ನನ್ನು ಇಷ್ಟ ಪಡಬೇಕಾದರೆ ನಾನು ಕಷ್ಟಪಡಬೇಕು. ಅದನ್ನು ನಾನು ಅಂಕಲ್ ಅರ್ಜುನ್ ಸರ್ಜಾ ಬಳಿ ಕಲಿತಿದ್ದೇನೆ ಎನ್ನುತ್ತಾರೆ ಧ್ರುವ ಸರ್ಜಾ. ಇದು ನಿರ್ದೇಶಕರ ಕನಸಿನ ಚಿತ್ರವಾಗಿರುವುದರಿಂದ ಪ್ರತಿ ಹಂತದಲ್ಲೂ ಕಲಿಕೆ ಇದೆ, ಕಲಿಯುತ್ತೇನೆ ಎನ್ನುತ್ತಾರೆ.