ಪ್ರೀತಂ ಗುಬ್ಬಿ ಮತ್ತೆ ಆಖಾಡಕ್ಕೆ ಇಳಿಯಲು ಸಿದ್ಧತೆ ನಡೆಸಿದ್ದಾರೆ. ಮಳೆಯಲಿ ಜೊತೆಯಲಿ ಚಿತ್ರದ ನಂತರ ಅವರು ಕೆಲ ಕಾಲ ತೆರೆಮರೆ ಸೇರಿದ್ದರು. ಚಿತ್ರಕ್ಕೆ ಫಿಲಂ ಫೇರ್ ಪ್ರಶಸ್ತಿ ಬಂದಾಗಲೂ ಕಾಣಿಸಿಕೊಂಡಿರಲಿಲ್ಲ. ಈಗ ಪ್ರತ್ಯಕ್ಷವಾಗಿದ್ದಾರೆ. ಅದೂ ಜಾನಿ ಮೂಲಕ.
ಅವರು ನಿರ್ದೇಶನಕ್ಕೆ ಕೈ ಹಾಕಿರುವ ಹೊಸ ಚಿತ್ರದ ಹೆಸರು- ಜಾನಿ. ಅದರ ಅಡಿ ಬರಹ ಇನ್ನೂ ಮಜವಾಗಿದೆ. 'ಜಾನಿ ಮೇರಾ ನಾಮ್, ಪ್ರೀತಿ ಮೇರಾ ಕಾಮ್...' -- ಈ ಮೂಲಕ ಪ್ರೀತಿಯ ಹ್ಯಾಂಗೋವರಿನಿಂದ ಆಚೆ ಬರಲು ಇವರು ಯತ್ನಿಸುತ್ತಿದ್ದಾರೆ.
ಈ ಹಿಂದೆ ಅವರು ಗಣೇಶ್, ಕಿರಣ್ ಅವರಂತಹ ಚಾಕೊಲೆಟ್ ಹೀರೋಗಳ ಹಿಂದೆ ಬಿದ್ದಿದ್ದರು. ಈಗ ಅವರ ಹೊಸ ಚಿತ್ರ ಜಾನಿಗೆ ಬ್ಲ್ಯಾಕ್ ಕೋಬ್ರಾ ಖ್ಯಾತಿಯ 'ದುನಿಯಾ' ವಿಜಯ್ ಬಿದ್ದಿದ್ದಾರೆ.
ಅಸಲಿಗೆ ಚಿತ್ರದ ನಾಯಕ ವಿಜಯ್ ಇನ್ನೂ ಕತೆ ಕೇಳಿಲ್ಲ. ಚಿತ್ರದ ಹೆಸರು ಕೇಳಿ ಇಂಪ್ರೆಸ್ ಆಗಿಬಿಟ್ಟಿರುವ ಇವರು ತುಟಿ ಪಿಟಕ್ ಅನ್ನದೇ ತಲೆಯಾಡಿಸಿ ಸಮ್ಮತಿಸಿ ಬಿಟ್ಟಿದ್ದಾರಂತೆ.
ಇಂಥದ್ದೊಂದು ಉತ್ತಮ ನಟನೊಂದಿಗೆ ಕೆಲಸ ಮಾಡುವ ಖುಷಿ ಪ್ರೀತಂಗೆ ಇದ್ದರೆ, ಒಂದು ಭಿನ್ನ ಚಿತ್ರದಲ್ಲಿ ನಟಿಸುತ್ತಿರುವ ಸಂತೋಷ ವಿಜಯ್‌ಗೆ. ಸದ್ಯ ಅವರ ವೀರಬಾಹು ಮತ್ತು ಕಂಠೀರವ ಚಿತ್ರೀಕರಣ ಕೊನೆಯ ಹಂತದಲ್ಲಿದೆ. ಅದು ಮುಗಿದ ನಂತರ ಜಾನಿ ಸೆಟ್ಟೇರಲಿದೆಯಂತೆ.