ತುಂಟಾಟ, ಮೊನಲಿಸಾ ಚಿತ್ರ ಮಾಡಿ ಗೆದ್ದಿರುವ ಇಂದ್ರಜಿತ್ ಲಂಕೇಶ್ ಹುಡುಗ ಹುಡುಗಿ ಚಿತ್ರಕ್ಕೆ ಕೈ ಹಾಕಿದ್ದಾರೆ. ಈ ಚಿತ್ರವನ್ನು ಅವರೇ ನಿರ್ದೇಶಿಸುತ್ತಿದ್ದಾರೆ. ತನ್ನ ಮೊನಾಲಿಸಾ ಚಿತ್ರದ ಜೋಡಿಯಾದ ಧ್ಯಾನ್ ಸದಾರನ್ನೇ ಇಟ್ಟುಕೊಂಡು ಮತ್ತೆ ಅಗ್ನಿಪರೀಕ್ಷೆಗಿಳಿದಿದ್ದಾರೆ ಇಂದ್ರಜಿತ್. ಸದ್ಯದಲ್ಲೇ ಚಿತ್ರದ ಶೂಟಿಂಗ್ ಹಂತವೂ ಮುಗಿಯಲಿದ್ದು, ಅಪ್ಪಟ ತರ್ಲೆ, ತಮಾಷೆ, ಪ್ರೀತಿ ಇರುವ ಚಿತ್ರ ಇದಾಗಿದೆ. ಹುಡುಗ ಹುಡುಗಿ ಅಂದಾಕ್ಷಣ ಸಾಮಾನ್ಯವಾಗಿ ಕಲ್ಪನೆಗೆ ಬರುವ ರೀತಿಯಲ್ಲೇ ಈ ಚಿತ್ರವೂ ಇದೆ.
ಇಲ್ಲಿ ಮನೆ ಮಂದಿ, ರೌಡಿ, ಲಾಂಗು, ಮಚ್ಚು, ಹೊಡೆದಾಟ, ಬಡಿದಾಟ ಹೆಚ್ಚಾಗಿ ಇಲ್ಲವಂತೆ. ಕೇವಲ ಸ್ನೇಹ, ಸ್ನೇಹಿತ, ಪ್ರೀತಿ ಇವುಗಳ ನಡುವೆಯೇ ಚಿತ್ರ ಆರಂಭವಾಗಿ ಮುಗಿದು ಹೋಗುತ್ತದೆಯಂತೆ. ಇದೊಂದು ಭಿನ್ನ ಚಿತ್ರವಾಗಿದ್ದು, ಸಾಮಾನ್ಯ ಚಿತ್ರದ ರೀತಿ ಯಾವುದೂ ಇರುವುದಿಲ್ಲ ಅನ್ನಲಾಗುತ್ತಿದೆ.
IFM
ಗಂಡ ಹೆಂಡತಿ, ಅಜ್ಜ ಅಜ್ಜಿ ಎಲ್ಲಾ ಇಲ್ಲಿ ಬರುವುದೇ ಇಲ್ಲ. ಕೇವಲ ಹುಡುಗರು- ಹುಡುಗಿಯರು ಈ ಚಿತ್ರದ ತುಂಬಾ ರಾರಾಜಿಸುತ್ತಾರೆ. ಒಟ್ಟಾರೆ ಇದೊಂದು ಪರಿಪೂರ್ಣ ಲವ್ ಸ್ಟೋರಿ ಅನ್ನುತ್ತಿದ್ದಾರೆ ಇಂದ್ರಜಿತ್. ಸಂದೇಶ್ ನಾಗರಾಜ್ ಚಿತ್ರದ ನಿರ್ಮಾಪಕ. ಜೋಶ್ವಾ ಶ್ರೀಧರ್ ಸಂಗೀತ ನೀಡಿದ್ದಾರೆ. ಕವಿರಾಜ್ ನಾಲ್ಕು ಹಾಡಿಗೆ ಸಂಗೀತ ಬರೆದಿದ್ದಾರೆ. ಬಿಯಾಂಕಾ ದೇಸಾಯಿ, ರೇಖಾ, ರಂಗಾಯಣ ರಘು ನಟಿಸುತ್ತಿದ್ದಾರೆ. ಲೇಖಾ ವಾಷಿಗ್ಟನ್ ಎಂಬ ಹೊಸ ನಟಿಯನ್ನು ಈ ಚಿತ್ರದ ಮೂಲಕ ಪರಿಚಯಿಸಲಾಗುತ್ತಿದೆ.
ಟಿವಿ ಮಾಧ್ಯಮದ ಹಿಂದೆ ಏನೇನು ನಡೆಯುತ್ತದೆ ಎನ್ನುವುದನ್ನು ಚಿತ್ರದ ಕಥೆಯಾಗಿಸಿಕೊಂಡು ಹೆಣೆಯಲಾಗಿದೆಯಂತೆ. ಈ ಚಿತ್ರ ಯಾರಿಗೂ ಯಾವುದೇ ಮೆಸೇಜ್ ನೀಡುವ ಚಿತ್ರ ಅಲ್ಲ. ಧ್ಯಾನ್ ಹಾಗೂ ಸದಾ ನಾಯಕ ನಾಯಕಿಯರಾಗಿ ನಟಿಸುತ್ತಿದ್ದಾರೆ.